ಡಿಸಿಗಳು, ಸಿಇಒಗಳ ಸಭೆ ಮುಂದುವರೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭೆಯ ಆರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು.
ಈ ವೇಳೆ ಫಲಿತಾಂಶ ಕಡಿಮೆ ಇರುವ ಜಿಲ್ಲೆಗಳಲ್ಲಿ ಡಿಡಿಪಿಐ ಗಳನ್ನೇ ನೇರ ಹೊಣೆ ಮಾಡುವಂತೆ ಸೂಚಿಸಿದರು.
SSLC ಯಲ್ಲಿ ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ DDPI ಗಳಿಗೆ ನೋಟಿಸ್ ನೀಡಬೇಕು, ನೋಟಿಸ್ ಗೆ ಕೊಟ್ಟ ಉತ್ತರ ಸಮರ್ಪಕ ಅನ್ನಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದರು.
*ಎಸ್‌ಎಸ್‌ಎಲ್‌ಸಿ ಯಲ್ಲಿ ಫಲಿತಾಂಶ ಕಡಿಮೆ ಬರುವುದಕ್ಕೆ ಶಿಕ್ಷಕರ ಕೊರತೆ, ಸಿಬ್ಬಂದಿ ಕೊರತೆ ಎನ್ನುವ ನೆಪ ಹೇಳಬೇಡಿ. ದಕ್ಷಿಣ ಕನ್ನಡ ಮತ್ತು ಇತರೆ ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಫಲಿತಾಂಶ ಬರುತ್ತಿದೆ. ಡಿಡಿಪಿಐಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಡಿಸಿಪಿಐಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ನಡೆಸಬೇಕು. ಇಲ್ಲ ಸಲ್ಲಸ ನೆಪ ಹೇಳಬೇಡಿ. ಶಿಕ್ಷಕರು ಮತ್ತು ಡಿಡಿಪಿಐ ಗಳು ಆಸಕ್ತಿಯಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಎಲ್ಲಾ ಕಡೆ ಬರುತ್ತದೆ ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ವಿವೇಕ ಯೋಜನೆಯಡಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹಣ ಮಂಜೂರು ಮಾಡುವುದರಲ್ಲಿ ವಿಳಂಬ ಆಗಬಾರದು. ಕ್ರಿಯಾ ಯೋಜನೆ ತಕ್ಷಣ ತಕ್ಷಣ ಸಿದ್ದಪಡಿಸಬೇಕು. ಹಣ ಬಿಡುಗಡೆ ಆಗಿದ್ದರೂ ಇನ್ನೂ ಶಾಲಾ ಕೊಠಡಿಗಳ ನಿರ್ಮಾಣ ಆಗದಿರುವ ಬಗ್ಗೆ ಜಿಲ್ಲಾಧಿಕಾರಿಗಳನ್ನು ಸಿಎಂ ಪ್ರಶ್ನಿಸಿದರು.
*ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆ ಆಗದಂತೆ ಶಿಕ್ಷಕರು ಮತ್ತು ಅಧಿಕಾರಿಗಳು ಪೋಷಕರ ಜೊತೆ ಮಾತನಾಡಬೇಕು, ಡ್ರಾಪ್‌ಔಟ್ ತಡೆಯಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡಬೇಕು. ಡಿಡಿಪಿಐ ಗಳು, ಬಿಇಒ ಗಳು ಶಾಲೆಗಳಿಗೆ ಭೇಟಿ ನೀಡ್ತಾ ಇದಾರಾ ಎನ್ನುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಗಮನಿಸಬೇಕು. ಪ್ರತೀ ವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಕಡಿಮೆ ಆಗುತ್ತಿರುವುದು ಕೆಟ್ಟ ಬೆಳವಣಿಗೆ. ಸರ್ಕಾರ ಮೊಟ್ಟೆ, ಹಾಲು, ರಾಗಿಮಾಲ್ಟ್, ಸೂಪು, ಹಾಸ್ಟೆಲ್ ಸವಲತ್ತು ಎಲ್ಲಾ ಕೊಟ್ಟು ಮಕ್ಕಳ ದಾಖಲಾತಿ ಪ್ರಮಾಣ ಏಕೆ ಕಡಿಮೆ ಆಗುತ್ತಿದೆ. ನಿಮ್ಮ ಪ್ರಾಯೋಗಿಕ ಅನುಭವಗಳು ಏನು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮಕ್ಕೆ ಸಿಎಂ ಸೂಚಿಸಿದರು.
*ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವುದನ್ನು ಗಮನದಲ್ಲಿಡಿ. ಡಿಡಿಪಿಐ ಗಳು ಜಿಲ್ಲೆಗಳಲ್ಲಿ ಕುಳಿತು ಕೆಲಸ ಮಾಡುವುದಲ್ಲ. ಇಡೀ ಜಿಲ್ಲೆ ಪ್ರಯಾಣ ಮಾಡಬೇಕು. ಸಿಇಒ ಗಳು ಕಡ್ಡಾಯವಾಗಿ ಈ ಬಗ್ಗೆ ನಿಗಾ ವಹಿಸಿ ಪೋಷಕರ ಜೊತೆ ಸಭೆ ನಡೆಸಿ ಚರ್ಚಿಸಲೇಬೇಕು ಎಂದು ಸಿಎಂ ತಾಕೀತು ಮಾಡಿದರು.
Laxmi News 24×7