ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂದಿ ವೇತನವನ್ನು ರಾಜ್ಯ ಸರಕಾರ ಪರಿಷ್ಕರಣೆ ಮಾಡಿದೆ. ಕಡಿಮೆ ವೇತನ ಎನ್ನುವ ಕಾರಣಕ್ಕೆ ಹಲವಾರು ಬಾರಿ ಅರ್ಜಿ ಆಹ್ವಾನ ಮಾಡಿದರೂ ಸರಕಾರದ ಯೋಜನೆಯ ಕೆಲಸಕ್ಕೆ ಸೇರಲು ನಿರಾಸಕ್ತಿ ತೋರಿದ್ದರಿಂದ ಅಂತಿಮವಾಗಿ ವೇತನ ಹೆಚ್ಚಳ ಮಾಡಿ ವೈದ್ಯರುಗಳನ್ನು ಆಕರ್ಷಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
50 ರಿಂದ 60 ಸಾವಿರಕ್ಕೆ ಏರಿಕೆ: ಎಂಬಿಬಿಎಸ್ ಪದವಿಯ ವೈದ್ಯರುಗಳಿಗೆ ಈಗಿರುವ 46,895 – 50 ಸಾವಿರ ರೂಪಾಯಿ ವೇತನವನ್ನು 60 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ತಜ್ಞ ವೈದ್ಯರು ಗಳಿಗೆ 1.10 ಲಕ್ಷ ದಿಂದ 1.30 ಲಕ್ಷ ಇರುವ ವೇತನವನ್ನು 1.40 ಲಕ್ಷ ರೂಪಾಯಿ ಹಾಗೂ ಸ್ಟಾಫ್ ನರ್ಸ್ ಗಳಿಗೆ 14,186 – 18,700 ರೂಗಳಿದ್ದ ವೇತನವನ್ನು 22 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವೇತನ ಪರಿಷ್ಕರಣೆಯಿಂದ ರಾಜ್ಯದಲ್ಲಿನ ಆರೋಗ್ಯ ಇಲಾಖೆಯ ವಿಶೇಷ ನವಜಾತ ಶಿಶು ಆರೈಕೆ ಘಟಕಗಳು (SNCUಗಳು) ಮತ್ತು ತೀವ್ರ ನಿಗಾ ಘಟಕ (ICUಗಳು) ಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿ ದಾದಿಯರ ವೇತನದಲ್ಲಿ ಗಣನೀಯ ಹೆಚ್ಚಳ ಉಂಟಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಕ್ಲಿನಿಕಲ್ ಸ್ಪೆಷಲಿಸ್ಟ್ ಕೊರತೆ ಬಹಳ ಇದ್ದು ವೇತನ ಹೆಚ್ಚಳದ ಜೊತೆಗೆ ಪೆಡಿಯಾಟ್ರಿಕ್ಟ್, ಅನಸ್ತೇಷಿಯಾ, ಜನರಲ್ ಮೆಡಿಸನ್, ಕೀಲು ಮೂಳೆ ವಿಭಾಗಗಳ ತಜ್ನ ವೈದ್ಯರುಗಳಿಗೆ ಅವರ ಪ್ರತಿ ವರ್ಷದ ಅನುಭವಕ್ಕೆ ಶೇ.2.5 ರಷ್ಟು ಹೆಚ್ಚಿನ ವೇತನ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವರು ವೇತನ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದಾರೆ.
579 ಹುದ್ದೆಗಳು ಖಾಲಿ: ಎನ್ ಹೆಚ್ ಎಂ ಯೋಜನೆಯಡಿ 2024- 2025 ರ ಸಾಲಿಗೆ ರಾಜ್ಯದಲ್ಲಿ 1398 ವೈದ್ಯ ಹುದ್ದೆಗಳು ಮಂಜೂರಾಗಿದ್ದು 815 ಭರ್ತಿಯಾಗಿವೆ 579 ಹುದ್ದೆಗಳು ಖಾಲಿ ಉಳಿದಿವೆ. ತಜ್ಞ ವೈದ್ಯರ ಹುದ್ದೆಗಳ ಪೈಕಿ 899 ಮಂಜೂರಾಗಿದ್ದು 594 ಸ್ಥಾನ ಭರ್ತಿಯಾಗಿವೆ 305 ಹುದ್ದೆಗಳು ಅಭ್ಯರ್ಥಿಗಳು ಬಾರದೇ ಇರುವುದರಿಂದ ನೇಮಕವಾಗದೇ ಖಾಲಿ ಉಳಿದಿವೆ. ಹಾಗೆಯೇ 9041 ಮಂಜೂರಾದ ನರ್ಸ್ ಹುದ್ದೆಗಳಿದ್ದು 8105 ಹುದ್ದೆಗಳು ಭರ್ತಿಯಾಗಿದ್ದರೆ 936 ಹುದ್ದೆಗಳು ಖಾಲಿ ಉಳಿದಿವೆ.
Laxmi News 24×7