Breaking News

ಮನೆ ಹಿತ್ತಲಿನಲ್ಲಿ ಗಾಂಜಾ ಬೆಳೆದ ವ್ಯಕ್ತಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Spread the love

ಬೆಂಗಳೂರು: ಮನೆಯ ಹಿತ್ತಲಿನಲ್ಲಿ ಐದಾರು ಗಾಂಜಾ ಗಿಡಗಳನ್ನು ಬೆಳೆದ ಆರೋಪದ ಮೇಲೆ 67 ವರ್ಷದ ವ್ಯಕ್ತಿಯೊಬ್ಬರ ವಿರುದ್ಧ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರ ಕಾಯ್ದೆ(ಎನ್​ಡಿಪಿಎಸ್) ಅಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ತಮ್ಮ ವಿರುದ್ಧ ಬನಶಂಕರಿ ಠಾಣಾ ಪೊಲೀಸರು ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಜಯನಗರದ 7ನೇ ಬ್ಲಾಕ್‌ ನಿವಾಸಿ ಚಂದ್ರಶೇಖರ್‌ (67) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರರು ಗಾಂಜಾ ಬೆಳೆಯುತ್ತಿದ್ದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ (ತನಿಖಾಧಿಕಾರಿಗಳು) ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಅರ್ಜಿದಾರರ ಮನೆಯ ಹಿತ್ತಲಿನಲ್ಲಿ ಪತ್ತೆಯಾದ ಗಾಂಜಾ ಪ್ರಮಾಣ ಪ್ರತ್ಯೇಕಿಸದೆ ಬೇರು ಸಹಿತ ಸಸ್ಯಗಳ ಜೊತೆಗೆ ತೂಕ ಹಾಕಲಾಗಿದೆ. ಪ್ಲಾಸ್ಟಿಕ್ ಚೀಲ ಸೇರಿದಂತೆ ಗಾಂಜಾ ಗಿಡದ ಬೇರು, ಕಾಂಡ, ಎಲೆ ಮೊಗ್ಗುಗಳನ್ನು ತೂಕ ಮಾಡಲಾಗಿದೆ. ಬೆಳೆ ಬೆಳೆಯುವುದಕ್ಕೆ ನೈಸರ್ಗಿಕವಾಗಿ ಹುಟ್ಟಿ ಬೆಳೆದ ಸಸಿಗಳನ್ನು ಸಮಾನವಾಗಿ ನೋಡಲಾಗದು. ಆದ್ದರಿಂದ ದೋಷಾರೋಪ ಪಟ್ಟಿಯೇ ಕಾನೂನಿಗೆ ವಿರುದ್ಧವಾಗಿದೆ ಎಂದು ತಿಳಿಸಿದ ಪೀಠ, ಚಂದ್ರಶೇಖರ್‌ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: 2023ರ ಸೆಪ್ಟೆಂಬರ್​ 1ರಂದು ಸಂಜೆ 4.30ರ ಸಮಯದಲ್ಲಿ ಪೊಲೀಸರು ಅರ್ಜಿದಾರರ ಮನೆಯನ್ನು ಶೋಧ ಮಾಡಿದ್ದರು. ಆಗ ವೇಳೆ ಮನೆಯ ಹಿತ್ತನಲಿನಲ್ಲಿ 5ರಿಂದ 6 ಗಾಂಜಾ ಗಿಡಗಳನ್ನು ಬೆಳೆದಿರುವುದು ಕಂಡು ಬಂದಿತ್ತು. ಇದರಿಂದ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಅಧೀನ ನ್ಯಾಯಾಲಯವು ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಸೆಕ್ಷನ್‌ 20(ಎ) ಮತ್ತು 20(ಬಿ)(2)(ಸಿ) ಅಡಿಯಲ್ಲಿ ಗಾಂಜಾ ಬೆಳೆದ, ಸಂಗ್ರಹಣೆ ಹಾಗೂ ಮಾರಾಟ ಮಾಡಿದ ಆರೋಪದಡಿ ಅರ್ಜಿದಾರರ ವಿರುದ್ಧ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಹೀಗಾಗಿ, ತಮ್ಮ ವಿರುದ್ದ ಎಫ್‌ಐಆರ್‌ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಚಂದ್ರಶೇಖರ್​ ಹೈಕೋರ್ಟ್‌ ಮೊರೆ ಹೋಗಿದ್ದರು.

ಆರೋಪಿ ಪರ ವಕೀಲರು, ”ಅರ್ಜಿದಾರರ ಮನೆಯ ಹಿತ್ತಲಿನಲ್ಲಿ ಸಾಮಾನ್ಯ ಕಳೆಗಳ ಜೊತೆಗೆ ಬೆಳೆದಿದ್ದ 5 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಗಿಡವನ್ನು ಅರ್ಜಿದಾರರೇ ಬೆಳೆಸಿದ್ದಾರೆ ಎಂಬುದನ್ನು ದೃಢಪಡಿಸುವ ಯಾವುದೇ ಪುರಾವೆ ಇಲ್ಲ. ವಶಪಡಿಸಿಕೊಂಡ ಗಿಡಗಳನ್ನು ಬೇರು, ಕಾಂಡ, ಎಲೆ, ಮೊಗ್ಗುಗಳನ್ನು ಬೇರ್ಪಡಿಸದೆ ತೂಕ ಹಾಕಿ, ಗಾಂಜಾ ಪ್ರಮಾಣವನ್ನು 27.360 ಕೆಜಿ ಎಂದು ತೋರಿಸಲಾಗಿದೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದ್ದರು.


Spread the love

About Laxminews 24x7

Check Also

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ: ಈ ಸೌಲಭ್ಯ ಪಡೆಯುವುದು ಹೇಗೆ?

Spread the loveಬೆಂಗಳೂರು : ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತ ಹಾಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ