ಶಿವಮೊಗ್ಗ: ತೀರ್ಥಹಳ್ಳಿಯ ಪ್ರಮೀಳಾ ನಾಯಕ್ ಎಂಬವರು ತಮ್ಮ 63ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ್ದಾರೆ.
ಪ್ರಮೀಳಾ ಇಲ್ಲಿನ ಎ.ಕೆ.ರಸ್ತೆ ನಿವಾಸಿ ಪ್ರಶಾಂತ್ ನಾಯಕ್ ಅವರ ಪತ್ನಿ. 2024-25ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು, ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಇವರಿಗೆ ಓರ್ವ ಪುತ್ರ ಇದ್ದು, ಸಿಂಗಾಪುರದಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳಿದ್ದಾರೆ.
ಪ್ರಮೀಳಾ ನಾಯಕ್ ಅವರು ತಮ್ಮ ಭಾವನ ಮೊಮ್ಮಗನ ಉಪನಯನ ಕಾರ್ಯಕ್ರಮದಲ್ಲಿ, “ನಾನು ಪರೀಕ್ಷೆ ಬರೆದು ಒಂದು ಮಾರ್ಕ್ಸ್ ಕಾರ್ಡ್ ಪಡೆಯಬೇಕು” ಎಂದು ಹೇಳಿದ್ದರಂತೆ. ಅದರಂತೆ ಶ್ರೀದತ್ತ ಮತ್ತು ಮಾನಸ ಎಂಬಿಬ್ಬರು ಶಿಕ್ಷಕರ ಬಳಿ ತಮ್ಮ ಭಾವನ ಮೊಮ್ಮಗನ ಜೊತೆ ತಾವೂ ಟ್ಯೂಷನ್ಗೆ ಹೋಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಪ್ರಮೀಳಾ, “ನಾವಿದ್ದುದು ಹಳ್ಳಿಯಲ್ಲಿ. ಬೇಗ ಮದುವೆಯಾದ ಕಾರಣ ಓದಲು ಆಗಲಿಲ್ಲ. ಮದುವೆಯಾದ ಮೇಲೂ ಓದಬೇಕೆಂಬ ಆಸೆ ಇತ್ತು. ಆದರೆ ಮಕ್ಕಳಾದ ಮೇಲೆ ಅವರ ವಿದ್ಯಾಭ್ಯಾಸದ ನಡುವೆ, ನನ್ನ ವಿದ್ಯಾಭ್ಯಾಸ ಸಾಧ್ಯವಾಗಲಿಲ್ಲ. ಆದರೆ ನನ್ನಲ್ಲಿ ಓದುವ ಆಸೆ ಹಾಗೇ ಇತ್ತು. ಇದರಿಂದ ನಾನು ಈ ಬಾರಿ 10ನೇ ತರಗತಿ ಪರೀಕ್ಷೆ ಬರೆದು ಪಾಸ್ ಮಾಡಿದೆ. ತುಂಬಾ ಖುಷಿಯಾಗಿದೆ. ನನ್ನ ಓದಿಗೆ ಪತಿ ಪ್ರಶಾಂತ್ ಸಹಕಾರ ನೀಡಿದ್ದಾರೆ. ಬೆಳಗ್ಗೆ, ಸಂಜೆ ಟ್ಯೂಷನ್ಗೆ ಕರೆದುಕೊಂಡು ಹೋಗುತ್ತಿದ್ದರು. ಮನೆಯಲ್ಲಿ ಅಡುಗೆ ಮಾಡದೆ ಇದ್ದರೂ, ಹೋಟೆಲ್ನಲ್ಲಿ ತಿಂದು ನನ್ನ ಓದಿಗೆ ಸಹಕಾರ ನೀಡಿದ್ದಾರೆ” ಎಂದು ಸಂತಸ ಹಂಚಿಕೊಂಡರು.
ತೀರ್ಥಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಮಾತನಾಡಿ, “ಪ್ರಮೀಳಾ ನಾಯಕ್ ಅವರು ಈ ವಯಸ್ಸಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವುದು ಅವರ ಜೀವನೋತ್ಸಾಹವನ್ನು ತೋರಿಸುತ್ತದೆ. ಅವರು ಪ್ರಥಮ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಾದರಿಯಾಗಿದ್ದಾರೆ” ಎಂದರು.