ಹುಬ್ಬಳ್ಳಿ : ಇಲ್ಲಿನ ಅಶೋಕನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಯತ್ನ ಮಾಡಿ ಬಳಿಕ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿ ಅಶೋಕನಗರ ಮಹಿಳಾ ಪಿಎಸ್ಐ ಅನ್ನಪೂರ್ಣಾ ಎನ್ಕೌಂಟರ್ ಮಾಡಿದ್ದಾರೆ.
ಹುಬ್ಬಳ್ಳಿ – ಧಾರವಾಡದ ಮಹಾನಗರದ ಇತಿಹಾಸದಲ್ಲಿ ನಡೆದ ಮೊದಲ ಎನ್ಕೌಂಟರ್ ಕೂಡ ಇದಾಗಿದೆ. ಈ ಹಿಂದೆ ಹಲವು ಬಾರಿ ಗೋಲಿಬಾರ್ ಆಗಿವೆ. ರೌಡಿಗಳ ಕಾಲಿಗೆ ಗುಂಡೇಟು ಬಿದ್ದಿವೆ. ಆದರೆ, ಎನ್ಕೌಂಟರ್ ಆಗಿರಲಿಲ್ಲ. ಆದರೆ, ಭಾನುವಾರ ಬಾಲಕಿಯ ಕೊಲೆ ಮಾಡಿದ ಆರೋಪಿ ತಪ್ಪಿಸಿಕೊಳ್ಳುವಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ, ಈ ವೇಳೆ , ಲೇಡಿ ಪಿಎಸ್ಐ ಆರೋಪಿಯನ್ನು ಎನ್ಕೌಂಟರ್ ಮಾಡಿದ್ದಾರೆ. ಈವರೆಗೆ ರಾಜ್ಯದಲ್ಲಿ ಯಾವ ಮಹಿಳಾ ಪೊಲೀಸ್ ಅಧಿಕಾರಿ ಮಾಡದ ಸಾಹಸವನ್ನು ಇವರು ಮಾಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಲೇಡಿ ಸಿಂಗಂ ಹಿನ್ನೆಲೆ : ಅಶೋಕನಗರ ಪೊಲೀಸ್ ಠಾಣೆಯ ಪಿಎಸ್ಐ ಅನ್ನಪೂರ್ಣ ಆರ್ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕಿನವರು. 2017ರ ಬ್ಯಾಚ್ನ ಅಧಿಕಾರಿಯಾಗಿರುವ ಇವರು, ಹುಬ್ಬಳ್ಳಿ ಶಹರ ಠಾಣೆ, ಸಿಇಎನ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿ, ಇದೀಗ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಪರಾರಿಯಾಗುವಾಗ ಹಲ್ಲೆಗೊಳಗಾಗಿರುವ ಅವರು, ಕೆಎಂಸಿ-ಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬಾಲಕಿ ಅಪಹರಣ ಸಿಸಿಟಿವಿಯಲ್ಲಿ ಸೆರೆ : ಬಾಲಕಿ ಅಪಹರಿಸಿ ನೀಚ ಕೃತ್ಯ ಎಸಗಿರುವ ಆರೋಪಿ ಬಿಹಾರ ಮೂಲದ ರಿತೇಶನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲು ಬಾಲಕಿಗೆ ಆಮಿಷ ತೋರಿಸಿ ಗೇಟಿನ ಆಚೆಯಿಂದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ.
ಪೇಂಟಿಂಗ್ ಕೆಲಸಕ್ಕೆ ಬಂದ ಕುಟುಂಬ : ಮೃತ ಬಾಲಕಿ ಕುಟುಂಬ ಹೊಟ್ಟೆಪಾಡಿಗಾಗಿ ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದೆ. ಇವರು ಕೊಪ್ಪಳ ಜಿಲ್ಲೆಯವರು. ಭಾನುವಾರ ಬೆಳಗ್ಗೆ ಮನೆಯೊಂದಕ್ಕೆ ಬಾಲಕಿಯ ತಾಯಿ ಕೆಲಸಕ್ಕೆ ಹೋದ ವೇಳೆ ಮಗಳನ್ನೂ ಕರೆದುಕೊಂಡು ಹೋಗಿದ್ದರು. ತಾಯಿ ಮನೆಯ ಒಳಗಡೆ ಕೆಲಸ ಮಾಡುತ್ತಿದ್ದಾಗ ಮನೆ ಮುಂದಿನ ಆವರಣದಲ್ಲಿ ಮಗಳು ಆಟವಾಡಿಕೊಂಡಿದ್ದಳು. ಈ ವೇಳೆ, ಮಗುವಿನ ಚಲನವಲನ ಗಮನಿಸಿದ ಆರೋಪಿ ಬಾಲಕಿಗೆ ಚಾಕೋಲೆಟ್ ಕೊಡಿಸುವುದಾಗಿ ಹೇಳಿ ಆಮಿಷತೋರಿಸಿ ಅಪಹರಿಸಿದ್ದಾನೆ. ಬಳಿಕ ಸಮೀಪದಲ್ಲೇ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಶೌಚಾಲಯಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
5ಕ್ಕೂ ಹೆಚ್ಚು ಆರೋಪಿಗಳ ಕಾಲಿಗೆ ಗುಂಡು : ಅವಳಿನಗರದ ಇತಿಹಾಸದಲ್ಲಿಯೇ ಕಳೆದೆರಡು ದಶಕದಲ್ಲಿ ಮೊದಲ ಬಾರಿಗೆ ಪೊಲೀಸರಿಂದ ಆರೋಪಿಯೊಬ್ಬನ ಎನ್ಕೌಂಟರ್ ನಡೆದಿದೆ. ಬಾಲಕಿ ಕೊಲೆ ಆರೋಪಿ ರಿತೇಶ ಗುಂಡೇಟಿಗೆ ಬಲಿಯಾಗಿದ್ದಾನೆ. ಇದರಿಂದ ಅಪರಾಧ ಕೃತ್ಯ ಎಸಗುವವರಿಗೆ ಒಂದು ದೊಡ್ಡ ಸಂದೇಶ ರವಾನೆ ಮಾಡಿದಂತಾಗಿದೆ ಎಂದು, ಪೊಲೀಸರ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಶ್ಲಾಘನೆ ವ್ಯಕ್ತವಾಗುತ್ತಿದೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು 2024ರ ಜುಲೈ 7ರಿಂದ ಅಧಿಕಾರ ವಹಿಸಿಕೊಂಡ ನಂತರ ಅಪರಾಧ ಕೃತ್ಯ ಎಸಗುವವರಲ್ಲಿ ನಡುಕ ಹುಟ್ಟಿಸಿದ್ದಾರೆ. ಹು – ಧಾ ಪೊಲೀಸರು ಇಲ್ಲಿಯವರೆಗೆ ಕೊಲೆ, ಸುಲಿಗೆ, ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದ 25ಕ್ಕೂ ಹೆಚ್ಚು ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಇವರಲ್ಲಿ ಮಹಾರಾಷ್ಟ್ರ ಗುಜರಾತ್, ಆಂಧ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ದೆಹಲಿ ಮೂಲದ ಅಂತಾರಾಜ್ಯ ಏಳು ತಂಡಗಳ ಡಕಾಯಿತರು, ಸುಲಿಗೆಕೋರರನ್ನು ಬಂಧಿಸಿದ್ದು ವಿಶೇಷವಾಗಿದೆ.
ಆದರೆ, ಬಾಲಕಿ ಕೊಲೆ ಪ್ರಕರಣದ ಆರೋಪಿಯ ಎನ್ಕೌಂಟರ್ ಮಾಡಿರುವುದು ಹುಬ್ಬಳ್ಳಿ-ಧಾರವಾಡ ಇತಿಹಾಸದಲ್ಲಿ ಇದೇ ಮೊದಲು. ಅದರಲ್ಲೂ ಮಹಿಳಾ ಪಿಎಸ್ಐವೊಬ್ಬರು ಎನ್ಕೌಂಟರ್ ಮಾಡಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ
Laxmi News 24×7