ಬೆಂಗಳೂರು: ಬೆಂಗಳೂರು ಜಲ ಮಂಡಳಿ ಅಳೆದೂ ತೂಗಿ ಕೊನೆಗೂ ಕುಡಿಯುವ ನೀರಿನ ದರ ಏರಿಕೆ ಮಾಡಿದೆ. ಹನ್ನೊಂದು ವರ್ಷಗಳ ನಂತರ ನೀರಿನ ದರ ಪರಿಷ್ಕರಣೆ ಮಾಡುತ್ತಿದ್ದು ನಾಳೆ ನೀರಿನ ದರ ಹೆಚ್ಚಳ ಕುರಿತು ಅಧಿಕೃತ ಆದೇಶ ಪ್ರಕಟವಾಗಲಿದೆ.
ಗೃಹ ಬಳಕೆದಾರರಿಗೆ ಪ್ರತಿ ಲೀಟರ್ಗೆ ಕನಿಷ್ಠ 0.15 ಪೈಸೆಯಿಂದ ಗರಿಷ್ಠ 1 ಪೈಸೆವರೆಗೆ ಹೆಚ್ಚಳ ಮಾಡಲಾಗಿದೆ. ಹೈ-ರೈಸ್ ಗೃಹ ಬಳಕೆದಾರರಿಗೆ ಪ್ರತಿ ಲೀಟರ್ಗೆ ಕನಿಷ್ಠ 0.30 ಪೈಸೆಯಿಂದ ಗರಿಷ್ಠ 1 ಪೈಸೆ ಪ್ರತಿ ಲೀಟರ್ನವರೆಗೆ ಹೆಚ್ಚಳವಾಗಲಿದೆ. ನಾನ್ ಡೊಮೆಸ್ಟಿಕ್ (ಗೃಹ ಬಳಕೆ ಹೊರತುಪಡಿಸಿ) ಬಳಕೆದಾರರಿಗೆ ಪ್ರತಿ ಲೀಟರ್ಗೆ 0.90 ಪೈಸೆಯಿಂದ ಗರಿಷ್ಠ 1.90 ಪೈಸೆಯವರೆಗೆ ಹೆಚ್ಚಳ ಆಗಲಿದೆ ಎಂದು ಬೆಂಗಳೂರು ಜಲಮಂಡಳಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಕುಡಿಯುವ ನೀರಿನ ದರ ಏರಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್, ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದಂತೆ ನೀರಿನ ದರ ಏರಿಕೆ ಮಾಡಲಾಗಿದೆ. ಈ ಸಂಬಂಧ ನಾಳೆ ಆದೇಶ ಹೊರಡಿಸಲಾಗುತ್ತದೆ. ಮೇ ತಿಂಗಳ ಬಿಲ್ನಲ್ಲಿ ದರ ಹೆಚ್ಚಳವನ್ನು ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ಒಂದು ದಶಕದಲ್ಲಿ ಬೆಂಗಳೂರು ನಗರ ಕೇವಲ ವ್ಯಾಪ್ತಿಯಲ್ಲಷ್ಟೇ ಅಲ್ಲ ಜನಸಂಖ್ಯೆಯಲ್ಲೂ ಅಗಾಧ ಬೆಳವಣಿಗೆಯನ್ನು ಕಂಡಿದೆ. ಸರ್ಕಾರದಿಂದ ಹಣಕಾಸಿನ ಸಹಾಯವಿಲ್ಲದೇ ಸ್ವಾಯತ್ತ ಸಂಸ್ಥೆಯಾಗಿರುವ ಜಲಮಂಡಲಿಗೆ ಕುಡಿಯುವ ನೀರಿಗೆ ವಿಧಿಸುವ ಶುಲ್ಕವೇ ಪ್ರಮುಖ ಆದಾಯವಾಗಿದೆ. ಕಳೆದ 10 ವರ್ಷಗಳಲ್ಲಿ ವಿದ್ಯುತ್ ವೆಚ್ಚವು ಸಹ ಶೇ.107ರಷ್ಟು ಹೆಚ್ಚಾಗಿದೆ. ಹಾಗೆಯೇ ನಿರ್ವಹಣಾ ವೆಚ್ಚದಲ್ಲಿ ಶೇ.122.5ರಷ್ಟು ಹೆಚ್ಚಳವಾಗಿದೆ. ಈ ಎಲ್ಲಾ ಕಾರಣಗಳಿಂದ ನೀರಿನ ದರ ಏರಿಕೆ ಅನಿವಾರ್ಯ ಎಂದು ದರ ಏರಿಕೆಗೆ ಕಾರಣಗಳನ್ನು ನೀಡಿದ್ದಾರೆ.
Laxmi News 24×7