ಕಟ್ಟಡ ಕಾರ್ಮಿಕರ ಮಕ್ಕಳ ವಿವಾಹದ ಅನುದಾನಕ್ಕೆ ಸಲ್ಲಿಸಿದ ಅರ್ಜಿ ರದ್ಧಾಗುತ್ತಿರುವುದೇಕೆ; ಶಾಸಕ ಮಹೇಶ್ ಟೆಂಗಿನಕಾಯಿ
ಕಟ್ಟಡ ಕಾರ್ಮಿಕರ ಮಕ್ಕಳ ವಿವಾಹಕ್ಕೆ ಅನುದಾನವನ್ನು ಪಡೆಯಲು ಸಲ್ಲಿಸುವ ಹಲವಾರು ಅರ್ಜಿಗಳು ವಿಳಂಬವಾಗುತ್ತಿರುವುದೇಕೆ? ಸರ್ಕಾರದ ಬಳಿ ಅನುದಾನದ ಕೊರತೆಯಿದೆಯೇ ಎಂದು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಸದನದಲ್ಲಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ನಿಜವಾದ ಕಟ್ಟಡ ಕಾರ್ಮಿಕರನ್ನು ಪರಿಶೀಲಿಸಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಕಟ್ಟಡ ಕಾರ್ಮಿಕರ ಮಕ್ಕಳ ವಿವಾಹಕ್ಕೆ ನೀಡಲಾಗುವ ಅನುದಾನದ 2022-23 ಸಾಲಿನಲ್ಲಿ 66 ಸಾವಿರದ 514 ಜನ, 2023-24ನೇ ಸಾಲಿನಲ್ಲಿ 50 ಸಾವಿರದ 398 , 2024-25ನೇ ಸಾಲಿನಲ್ಲಿ 40 ಸಾವಿರದ 262 ಜನರು ಅಂದರೇ, ಒಟ್ಟು 1 ಲಕ್ಷ 57 ಸಾವಿರದ 174 ಜನರು ಅರ್ಜಿಯನ್ನು ಸಲ್ಲಿಸಿದ್ದರು.
ಅದರಲ್ಲಿ 1 ಲಕ್ಷ 6 ಸಾವಿರದ 91 ಜನರಿಗೆ ಮಾತ್ರ ಅನುದಾನವನ್ನು ನೀಡಲಾಗಿದೆ. ಬಹಳಷ್ಟು ಅರ್ಜಿಗಳು ರದ್ಧಾಗಿದ್ದು, ಇದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು. ಅಲ್ಲದೇ ಒಂದು ವರ್ಷದ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿಯ ವರೆಗೂ ಅನುದಾನವನ್ನು ನೀಡಲು ವಿಳಂಬವಾಗಲೂ ಸರ್ಕಾರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ, ಮನೆಗೆ ಭೇಟಿ ನೀಡಿ ಅನುದಾನವನ್ನು ಮಂಜೂರು ಮಾಡಲಾಗುತ್ತಿದೆ. 56 ಲಕ್ಷ ಇದ್ದ ಕಾರ್ಮಿಕ ಕಾರ್ಡ್’ಗಳಲ್ಲಿ ಫೇಕ್ ಕಾರ್ಮಿಕರನ್ನು ಕಡಿತಗೊಳಿಸಲಾಗಿದೆ. ಇದರಲ್ಲಿಗ 26 ಲಕ್ಷ ನಿಜವಾದ ಕಾರ್ಮಿಕರಿದ್ದು, ಇನ್ನು ಪರಿಶೀಲನೆ ಜಾರಿಯಲ್ಲಿದೆ. ನಿಜವಾದ ಕಾರ್ಮಿಕರಿಗೆ ಮಾತ್ರ ಈ ಯೋಜನೆಯನ್ನು ತಲುಪಿಸಲಾಗುತ್ತಿದೆ ಎಂದರು.