ಹಾಸನ, ಮೇ.26: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್ ಡ್ರೈವ್ ಕೇಸ್ (Pendrive) ಸಂಬಂಧ ಎಸ್ಐಟಿ ಪೊಲೀಸರ ನಡೆ ಮೇಲೆ ಅನುಮಾನ ಮೂಡುತ್ತಿದೆ. ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದ ಐವರು ಪ್ರಮುಖ ಆರೋಪಿಗಳನ್ನು ಎಸ್ಐಟಿ ಬಂಧಿಸಿಲ್ಲ. ಹೀಗಾಗಿ ಎಸ್ಐಟಿ (SIT) ತನಿಖಾ ವೈಖರಿ ಅಚ್ಚರಿ ಮೂಡಿಸಿದೆ.
ಪ್ರಕರಣದಲ್ಲಿ ಆರು, ಏಳು, ಎಂಟನೇ ಆರೋಪಿಗಳೆಂದು ಮೂವರನ್ನು ಬಂಧಿಸಲಾಗಿದೆ.
ಪ್ರೀತಂಗೌಡ ಆಪ್ತ ಲಿಖಿತ್ ಗೌಡ, ಕಚೇರಿ ಸಹಾಯಕ ಚೇತನ್ ಹಾಗೂ ವಕೀಲ ದೇವರಾಜೇಗೌಡನನ್ನು ಬಂಧಿಸಲಾಗಿದೆ. ಆದರೆ ಎಫ್ಐಆರ್ನಲ್ಲಿ ಹೆಸರಿದ್ದ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಆಪ್ತ ಪುಟ್ಟಿ ಅಲಿಯಾಸ್ ಪುಟ್ಟರಾಜ್, ವೀಡಿಯೋ ಹಂಚಿಕೆಯ ಪ್ರಮುಖ ಆರೋಪಿ ನವೀನ್ ಗೌಡ, ಚೇತನ್ ಹಾಗು ಪ್ರೀತಂಗೌಡ ಆಪ್ತ ಶರತ್ನನ್ನು ಬಂಧಿಸಿಲ್ಲ.
ಮೇ 8ರಂದೇ ಪುಟ್ಟರಾಜ್, ನವೀನ್, ಚೇತನ್, ಕಾರ್ತಿಕ್ ನಿರೀಕ್ಷಣ ಜಾಮೀನು ಅರ್ಜಿ ವಜಾ ಆಗಿದೆ. ಜಿಲ್ಲಾ ನ್ಯಾಯಾಲಯ ದಲ್ಲಿ ಕೇಸ್ ವಜಾ ಹಿನ್ನೆಲೆಯಲ್ಲಿ ಆರೋಪಿತರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಆದರೂ ಪ್ರಮುಖ ಆರೋಪಿಗಳು ಅರೆಸ್ಟ್ ಆಗಿಲ್ಲ.
ಈವರೆಗೆ ಬಂಧಿಸಿದ ಮೂವರಿಂದ ಮಹತ್ವದ ದಾಖಲೆ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಲ್ಯಾಪ್ಟಾಪ್ ಅನ್ನು ಎಫ್ಎಸ್ಎಲ್ಗೆ ಕಳಿಸಲಾಗಿದೆ. ವರದಿ ಬಂದ ಬಳಿಕ ವಿಚಾರಣೆ ಮುಂದುವರಿಯುವ ಸಾದ್ಯತೆ ಇದೆ.