Breaking News
Home / ರಾಜಕೀಯ / ಕಾಂಗ್ರೆಸ್ 3ನೇ ಪಟ್ಟಿಗೆ ಕ್ಷಣಗಣನೆ; ಬಿಜೆಪಿಗೆ 7 ಕ್ಷೇತ್ರಗಳ ತಲೆನೋವು;

ಕಾಂಗ್ರೆಸ್ 3ನೇ ಪಟ್ಟಿಗೆ ಕ್ಷಣಗಣನೆ; ಬಿಜೆಪಿಗೆ 7 ಕ್ಷೇತ್ರಗಳ ತಲೆನೋವು;

Spread the love

ಬೆಳಗಾವಿ: ಬಿಜೆಪಿಗಿಂತ ಮೊದಲು ಮೊದಲನೇ ಪಟ್ಟಿ ಬಿಡುಗಡೆ ಮಾಡಿ ಅಚ್ಛರಿ ಉಂಟು ಮಾಡಿದ್ದ ಕಾಂಗ್ರೆಸ್ ಇದೀಗ 3ನೇ ಪಟ್ಟಿ ಬಿಡುಗಡೆ ಮಾಡಲು ತಿಣುಕಾಡುತ್ತಿದೆ. ಬೆಳಗಾವಿ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಬಿಜೆಪಿ ಎಲ್ಲ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇವುಗಳಲ್ಲಿ ಸುಮಾರು 7 ಕ್ಷೇತ್ರಗಳಲ್ಲಿ ಪ್ರಬಲ ಬಂಡಾಯ ಎದುರಿಸುತ್ತಿದೆ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿತ್ತು. 2ನೇ ಪಟ್ಟಿಯಲ್ಲಿ 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೂ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಬಾಕಿ ಇದೆ. ಈಗಾಗಲೆ ಪ್ರಕಟವಾಗಿರುವ ಪೈಕಿ ಗೋಕಾಕ ಕ್ಷೇತ್ರದಲ್ಲಿ ಪ್ರಭಲ ಆಕಾಂಕ್ಷಿಯಾಗಿದ್ದ ಅಶೋಕ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅವರ ಮನವೊಲಿಸಲಾಗಿದೆ. ಸವದತ್ತಿಯಲ್ಲೂ ಸೌರವ್ ಚೋಪ್ರಾ ಮತ್ತು ಪಂಚನಗೌಡ ಬಂಡಾಯವೆದ್ದಿದ್ದರು. ಅವರಿಬ್ಬರೂ ಜೆಡಿಎಸ್ ಸೇರಿದ್ದಾರೆ. ಕಿತ್ತೂರಲ್ಲಿ ಡಿ.ಬಿ.ಇನಾಮದಾರ ಕುಟುಂಬ ಬಂಡಾಯವೆದ್ದಿದೆ.

 

 

ಹಾಗೆ ನೋಡಿದರೆ ಅಥಣಿ ಹೊರತುಪಡಿಸಿದರೆ ಉಳಿದ 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಹಳ ಹಿಂದೆಯೇ ಅಂತಿಮಗೊಳಿಸಲಾಗಿದೆ. ಆದರೆ ವಿರೋಧಿಗಳ ದಾರಿ ತಪ್ಪಿಸುವುದಕ್ಕೋಸ್ಕರವೋ ಎನ್ನುವಂತೆ ಇನ್ನೂ 3ನೇ ಪಟ್ಟಿ ಬಾಕಿ ಇದೆ.

ಬೆಳಗಾವಿ ಉತ್ತರಕ್ಕೆ ಮಾಜಿ ಶಾಸಕ ಫಿರೋಜ್ ಸೇಠ್ ಅವರ ಸಹೋದರ ಆಸಿಫ್ (ರಾಜು) ಸೇಠ್ ಹೆಸರು ಕಾಂಗ್ರೆಸ್ ನಲ್ಲಿ ಅಂತಿಮವಾಗಿದೆ. ಇದೀಗ, ಬಿಜೆಪಿ ಟಿಕೆಟ್ ವಂಚಿತ ಅನಿಲ ಬೆನಕೆ ಕಾಂಗ್ರೆಸ್ ಗೆ ಬರಬಹುದೆನ್ನುವ ವದಂತಿ ಇದ್ದರೂ, ಅನಿಲ ಬೆನಕೆ ತಾವು ಬಿಜೆಪಿ ಪಟ್ಟಿ ಬದಲಾಗುವ ಆಶಯ ಹೊಂದಿರುವುದಾಗಿಯೂ, ಬಿಜೆಪಿಯಲ್ಲೇ ಟಿಕೆಟ್ ಪಡೆಯುವುದಾಗಿಯೂ ಹೇಳುತ್ತಿದ್ದಾರೆ. ಬೇರೆ ಪಕ್ಷಗಳಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದೂ ಹೇಳಿದ್ದಾರೆ.

ಬೆಳಗಾವಿ ದಕ್ಷಿಣಕ್ಕೆ 7 ಆಕಾಂಕ್ಷಿಗಳಿದ್ದರೂ ಪ್ರಭಾವತಿ ಚಾವಡಿ ಹೆಸರನ್ನು ಅಂತಿಮಗೊಳಿಸಲಾಗಿದೆ. ಇಲ್ಲಿ ಹೆಸರು ಪ್ರಕಟಣೆಯ ನಂತರ ಒಂದಿಷ್ಟು ಭಿನ್ನಮತ ಏಳಬಹುದು. ಪ್ರಭಾವತಿ ಹೆಸರು ಬೆಳಗಾವಿಗೆ ಹೊಸದು. ಇದು ಈ ಮೊದಲು ಅವರ ಕಾರ್ಯಕ್ಷೇತ್ರವಾಗಿರಲಿಲ್ಲ. ಅವರು ತೇರದಾಳ ಕ್ಷೇತ್ರದ ಟಿಕೆಟ್ ಗೆ ಪ್ರಯತ್ನಿಸಿ, ಅಲ್ಲಿ ಸಿಗುವುದಿಲ್ಲ ಎನ್ನುವುದು ಖಿಚಿತವಾದ ನಂತರ ಬೆಳಗಾವಿ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಸ್ಥಳೀಯರು ಒಂದಿಷ್ಟು ಆಕ್ಷೇಪ ವ್ಯಕ್ತಪಡಿಸಬಹುದು. ಕಳೆದ ಬಾರಿಯೂ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಆಮದು ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ತೀವ್ರ ಹಿನ್ನಡೆ ಅನುಭವಿಸಿತ್ತು.

 

 

ರಾಯಬಾಗದಲ್ಲಿ ಮಹಾವೀರ ಮೋಹಿತೆ ಪಕ್ಷದ ಹಿರಿಯ ಕಾರ್ಯಕರ್ತ. ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ತಮಿಳುನಾಡಿನಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಶಂಭು ಕಲ್ಲೋಳಿಕರ್ ಹುದ್ದೆಗೆ ರಾಜಿನಾಮೆ ನೀಡಿ ಈ ಚುನಾವಣೆಗೆ ನಿಲ್ಲುವುದಕ್ಕಾಗಿಯೇ ರಾಯಬಾಗಕ್ಕೆ ವಾಪಸ್ಸಾಗಿದ್ದಾರೆ. ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರು, ಖರ್ಗೆ ಅವರ ಭರವಸೆ ಪಡೆದೇ ಬಂದಿದ್ದಾರೆ ಎನ್ನುವ ಸುದ್ದಿ ಇದೆ. ಹಾಗಾಗಿ ಮೋಹಿತೆ ಮನವೊಲಿಸಿ ಶಂಭು ಕಲ್ಲೋಳಿಕರ್ ಹೆಸರನ್ನೇ ಅಂತಿಮಗೊಳಿಸುವ ಕಸರತ್ತು ನಡೆದಿದೆ.

ಅಥಣಿಗೆ ಕಾಂಗ್ರೆಸ್ ಟಿಕೆಟ್ ಗಾಗಿ ಗಜಾನನ ಮಂಗಸೂಳಿ, ಎಸ್.ಕೆ.ಬೂಟಾಳಿ ಮತ್ತು ದರೆಪ್ಪ ಠಕ್ಕಣ್ಣವರ್ ಹೆಸರಿತ್ತು. ಅಂತಿಮವಾಗಿ ಠಕ್ಕಣ್ಣವರ್ ಹೆಸರೇ ಘೋಷಣೆಯಾಗುವ ಹಂತದಲ್ಲಿತ್ತು. ಆದರೆ ಅಷ್ಟರಲ್ಲಾಗಲೇ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ವಂಚಿತವಾಗುವ ವಾಸನೆ ಹರಡಿತ್ತು. ಹಾಗಾಗಿ ಅವರು ಬರುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಟಿಕೆಟ್ ಪೆಂಡಿಂಗ್ ಇಡಲಾಗಿತ್ತು. ಇದೀಗ ಶುಕ್ರವಾರ ಅವರು ಕಾಂಗ್ರೆಸ್ ಸೇರುವ ಮೂಲಕ ಎಲಲವೂ ಕ್ಲಿಯರ್ ಆಗಲಿದೆ. ಹಾಗಾಗಿ ಅಥಣಿ ಟಿಕೆಟ್ ಲಕ್ಷ್ಮಣ ಸವದಿಗೆ ಫಿಕ್ಸ್ ಆಗಿದೆ.


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ