Breaking News
Home / ರಾಜಕೀಯ / ಅನಗತ್ಯ ಕ್ಯಾತೆ; ರಾಜ್ಯದ ಎಲ್ಲೆಯಲ್ಲಿ ಮಹಾರಾಷ್ಟ್ರ ಯೋಜನೆ

ಅನಗತ್ಯ ಕ್ಯಾತೆ; ರಾಜ್ಯದ ಎಲ್ಲೆಯಲ್ಲಿ ಮಹಾರಾಷ್ಟ್ರ ಯೋಜನೆ

Spread the love

ಭಾಷೆ-ಭೂಮಿ ವಿಚಾರದಲ್ಲಿ ಜನರ ಭಾವನೆಗಳನ್ನು ಕೆರಳಿಸಿ, ಅದನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಲಾಭ ಪಡೆಯುವ ಹುನ್ನಾರ ಹೊಸದೇನಲ್ಲ. ಕರ್ನಾಟಕದ ಜತೆ ಗಡಿ ವಿವಾದ ಜೀವಂತ ಇರುವಾಗಲೇ, ಮಹಾರಾಷ್ಟ್ರ ಸರ್ಕಾರವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವಂತಹ ಪ್ರಯತ್ನಕ್ಕೆ ಕೈಹಾಕಿದೆ.

ಅಷ್ಟೇ ಅಲ್ಲ, ಇನ್ನೊಂದು ರಾಜ್ಯದ ಪ್ರದೇಶದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವಂತಹ ನಡೆ ಇದೆಂದು ಖಂಡನೆ ವ್ಯಕ್ತವಾಗಿದೆ.

ಕರ್ನಾಟಕದ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿನ 865 ಹಳ್ಳಿಗಳಲ್ಲಿನ ಮರಾಠಿಗರಿಗೆ ಮತ್ತು ಮರಾಠಿಯೇತರರಿಗೆ ಮಹಾತ್ಮ ಫುಲೆ ಜನಾರೋಗ್ಯ ಯೋಜನೆ ಜಾರಿಗೆ 54 ಕೋಟಿ ರೂ.ಗಳನ್ನು ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿರುವುದು ಈಗ ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ಕೆಲ ತಿಂಗಳ ಹಿಂದೆ ಗಡಿ ವಿವಾದ ಮತ್ತೊಮ್ಮೆ ತೀವ್ರ ಸ್ವರೂಪದ ವಾಗ್ವಾದಕ್ಕೆ ಕಾರಣವಾದಾಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಮಧ್ಯಪ್ರವೇಶ ಮಾಡಿ, ಸಂಧಾನಸೂತ್ರವೊಂದನ್ನು ಮಂಡಿಸಿದ್ದರು. ಆ ಪ್ರಕಾರ, ಗಡಿ ವಿವಾದ ವಿಚಾರ ಸುಪ್ರೀಂ ಕೋರ್ಟಿನಲ್ಲಿ ಇರುವುದರಿಂದ, ಅಲ್ಲಿ ತೀರ್ಪು ಬರುವ ಮುನ್ನ ಎರಡೂ ರಾಜ್ಯಗಳು ಪರಸ್ಪರರ ಪ್ರದೇಶಗಳ ಮೇಲೆ ಹಕ್ಕು ಸಾಧಿಸಲು ಹೋಗಬಾರದು ಮತ್ತು ಸಮನ್ವಯ ಸಾಧಿಸಲು ಎರಡೂ ರಾಜ್ಯಗಳ ಸಚಿವರ ಸಮಿತಿ ರಚಿಸಬೇಕು ಎಂದು ಸೂಚಿಸಿದ್ದರು. ಈಗ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಈ ಸೂತ್ರವನ್ನು ಅತಿಕ್ರಮಿಸುವಂಥದು ಎನ್ನದೆ ವಿಧಿಯಿಲ್ಲ. ಅಷ್ಟಕ್ಕೂ, ಮೊದಲು ಮಹಾಜನ್ ವರದಿಗೆ ಬದ್ಧ ಎಂದಿದ್ದ ಮಹಾರಾಷ್ಟ್ರ, ನಂತರದಲ್ಲಿ ವರಸೆ ಬದಲಾಯಿಸಿ ವರದಿಯನ್ನು ವಿರೋಧಿಸಿತು. ಜತೆಗೆ, ಸವೋಚ್ಚ ನ್ಯಾಯಾಲಯಕ್ಕೂ ಹೋಯಿತು. ಅಲ್ಲಿನ್ನೂ ವಿಚಾರಣೆ ಬಾಕಿಯಿದೆ. ಹೀಗಿರುವಾಗ ಇನ್ನೊಂದು ರಾಜ್ಯದ ಭೂಪ್ರದೇಶದಲ್ಲಿ ಯೋಜನೆ ಘೋಷಿಸುವುದು ದುಸ್ಸಾಹಸವಲ್ಲದೆ, ಗಡಿಕಿಡಿಗೆ ಇನ್ನಷ್ಟು ಕಿಚ್ಚು ಹಚ್ಚುವ ಯತ್ನವೇ ಸರಿ.

 

ಮಹಾರಾಷ್ಟ್ರ ಏಕೀಕರಣ ಸಮಿತಿಯು ಬೆಳಗಾವಿಯಲ್ಲಿ ಭಾಷೆ ಮತ್ತು ಗಡಿ ವಿಚಾರವನ್ನು ಮಂದಿಟ್ಟುಕೊಂಡೇ ಅನೇಕ ವರ್ಷಗಳಿಂದ ರಾಜಕೀಯ ಮಾಡುತ್ತ ಬಂದಿತ್ತು. ಅಂತೂ ಈಗ ಅದರ ಅಬ್ಬರಕ್ಕೆ ಸ್ವಲ್ಪ ಕಡಿವಾಣ ಬಿದ್ದಿದೆ. ಎಂಇಎಸ್ ಎಂದಲ್ಲ, ಮಹಾರಾಷ್ಟ್ರದ ಎಲ್ಲ ಪಕ್ಷಗಳು ಗಡಿ ವಿಚಾರದಲ್ಲಿ ಇದೇ ನೀತಿ ಅನುಸರಿಸುತ್ತ ಬಂದಿವೆ. ಗಡಿ ಪ್ರಕರಣ ಸವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಇರುವಾಗ, ಒಂದು ರಾಜ್ಯವು ಮತ್ತೊಂದು ರಾಜ್ಯದ ಆಡಳಿತ ಪ್ರದೇಶದಲ್ಲಿ ಯೋಜನೆಯನ್ನು ಘೋಷಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆಯೇ ಎಂಬ ಬಗ್ಗೆಯೂ ಕರ್ನಾಟಕ ಸರ್ಕಾರ ಕಾನೂನು ತಜ್ಞರೊಂದಿಗೆ ಸಮಾಲೋಚಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂತಾದವರು ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಈ ಕ್ರಮವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದು ಎಂಬ ಸಿದ್ದರಾಮಯ್ಯ ಅವರ ಅಭಿಪ್ರಾಯ ಒಪುಪವಂಥದೇ ಆಗಿದೆ. ‘ಕರ್ನಾಟಕವು ಮಹಾಜನ್ ವರದಿಗೆ ಬದ್ಧ ಮತ್ತು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಸರ್ವಾನುಮತದ ನಿರ್ಣಯವನ್ನು ಈ ಹಿಂದೆ ವಿಧಾನಮಂಡಲ ಅಧಿವೇಶನದಲ್ಲಿಯೇ ಕೈಗೊಳ್ಳಲಾಗಿತ್ತು. ನಾಡು-ನುಡಿ ವಿಚಾರದಲ್ಲಿ ಇಂಥ ರಾಜಕೀಯ ಐಕಮತ್ಯ ಅಗತ್ಯ.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ