Breaking News
Home / ರಾಜಕೀಯ / ಪಿಎಸ್‌ಐ ಅಕ್ರಮ: ಬೀಗದ ಕೀ ಕೊಟ್ಟು ಸಿಕ್ಕಿಬಿದ್ದ ಪೌಲ್‌

ಪಿಎಸ್‌ಐ ಅಕ್ರಮ: ಬೀಗದ ಕೀ ಕೊಟ್ಟು ಸಿಕ್ಕಿಬಿದ್ದ ಪೌಲ್‌

Spread the love

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷೆಯ ಒಎಂಆರ್‌ ಪ್ರತಿಗಳನ್ನು ಇರಿಸಿದ್ದ ಭದ್ರತಾ ಕೊಠಡಿಯ ಬೀಗದ ಕೀಯನ್ನು ತನ್ನ ಕೈಕೆಳಗಿನ ನೌಕರರಿಗೆ ನೀಡಿ, ಅವರ ಮೂಲಕವೇ ಉತ್ತರ ಪತ್ರಿಕೆಗಳನ್ನು ತಿದ್ದಿಸಿರುವ ಕೃತ್ಯದಲ್ಲಿ ಎಡಿಜಿಪಿ ಅಮ್ರಿತ್‌ ಪೌಲ್‌ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟ ಬೆನ್ನಲ್ಲೇ, ಸಿಐಡಿ ಪೌಲ್‌ ಅವರನ್ನು ಸೋಮವಾರ ಬಂಧಿಸಿದೆ.

 

ರಾಜ್ಯದ ಇತಿಹಾಸದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಎಡಿಜಿಪಿ) ದರ್ಜೆಯ ಐಪಿಎಸ್‌ ಅಧಿಕಾರಿ ಅಪರಾಧ ಪ್ರಕರಣವೊಂದರಲ್ಲಿ ಬಂಧಿರಾಗಿರುವುದು ಇದೇ ಮೊದಲು. ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಏಪ್ರಿಲ್‌ನಲ್ಲಿ ಮೊದಲ ಎಫ್‌ಐಆರ್‌ ದಾಖಲಾಗಿತ್ತು. ಆಗಿನಿಂದಲೂ ಈ ಪ್ರಕರಣದಲ್ಲಿ ಅಮ್ರಿತ್‌ ಪೌಲ್‌ ಕೈವಾಡವಿರುವ ಆರೋಪ ಕೇಳಿಬಂದಿತ್ತು.

 

ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಎಫ್‌ಐಆರ್‌ಗಳು ದಾಖಲಾಗಿದ್ದು, ಒಟ್ಟು 65 ಆರೋಪಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ನಾಲ್ವರು ಡಿವೈಎಸ್‌ಪಿಗಳು ಸೇರಿದಂತೆ ಪೊಲೀಸ್‌ ಇಲಾಖೆಯ 18 ಅಧಿಕಾರಿಗಳು ಹಾಗೂ ಸಿಬ್ಬಂದಿ, 47 ಮಂದಿ ಅಭ್ಯರ್ಥಿಗಳು ಮತ್ತು ಮಧ್ಯವರ್ತಿಗಳು ಸೇರಿದ್ದಾರೆ. ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 35ನೇ ಆರೋಪಿಯನ್ನಾಗಿ ಪೌಲ್‌ ಅವರನ್ನು ಬಂಧಿಸಲಾಗಿದೆ.

ಪೌಲ್‌ ಅವರನ್ನು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನ ಕಸ್ಟಡಿಗೆ ಪಡೆದಿರುವ ಸಿಐಡಿ ಅಧಿಕಾರಿಗಳು ಅರಮನೆ ರಸ್ತೆಯಲ್ಲಿರುವ ಕಚೇರಿಯಲ್ಲಿ ವಿಚಾರಣೆ ಆರಂಭಿಸಿದ್ದಾರೆ. ಇದರ ನಡುವೆಯೇ ಡಿವೈಎಸ್ಪಿ ಶಾಂತಕುಮಾರ್ ಅವರನ್ನೂ ಕೋರಮಂಗಲ ಠಾಣೆ ಪ್ರಕರಣದಲ್ಲಿ ಪುನಃ ಸಿಐಡಿ ಅಧಿಕಾರಿಗಳು 7 ದಿನ ಕಸ್ಟಡಿಗೆ ಪಡೆದಿದ್ದು, ಅವರ ವಿಚಾರಣೆಯೂ ಆರಂಭವಾಗಿದೆ.

‘ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮ್ರಿತ್ ಪೌಲ್, ತಮ್ಮ ಅಧೀನದ ನೌಕರರ ಜೊತೆ ಸೇರಿಕೊಂಡು ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ಬಂಧಿತ ನೌಕರರು ಸಹ ಹೇಳಿಕೆ ನೀಡಿದ್ದು, ಅದನ್ನು ಮುಂದಿಟ್ಟುಕೊಂಡು ಎಡಿಜಿಪಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

 

‘2021ರ ಅಕ್ಟೋಬರ್ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಅಭ್ಯರ್ಥಿಗಳ ಒಎಂಆರ್ ಅಸಲು ಪ್ರತಿಗಳನ್ನು ಟ್ರಂಕ್‌ಗಳಲ್ಲಿ ಇರಿಸಿ, ಅದರ ಬೀಗಕ್ಕೆ ಸೀಲ್ ಮಾಡಿ ಬೆಂಗಳೂರಿನಲ್ಲಿರುವ ನೇಮಕಾತಿ ವಿಭಾಗದ ಕಚೇರಿಗೆ ಕಳುಹಿಸಲಾಗಿತ್ತು. ಅವೆಲ್ಲ ಟ್ರಂಕ್‌ಗಳನ್ನು ವಿಭಾಗದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿತ್ತು. ಕೊಠಡಿಗೆ ಹಾಕಿದ್ದ ಬೀಗಕ್ಕೆ ಎರಡು ಕೀಗಳಿದ್ದವು. ಒಂದು ಎಡಿಜಿಪಿ ಬಳಿ ಇದ್ದರೆ, ಮತ್ತೊಂದು ವಿಭಾಗದ ಸೂಪರಿಂಟೆಂಡೆಂಟ್‌ ಬಳಿ ಇತ್ತು’ ಎಂದು ಮೂಲಗಳು ತಿಳಿಸಿವೆ.

‘ಸೂಪರಿಂಟೆಂಡೆಂಟ್ ಬಳಿ ಇದ್ದ ಕೀ ಬಗ್ಗೆ ತನಿಖೆ ನಡೆಯುತ್ತಿದ್ದು, ಅವರು ಅಕ್ರಮದಲ್ಲಿ ಭಾಗಿಯಾದ ಬಗ್ಗೆ ಸದ್ಯಕ್ಕೆ ಪುರಾವೆಗಳು ಸಿಕ್ಕಿಲ್ಲ. ಆದರೆ, ಎಡಿಜಿಪಿ ತಮ್ಮ ಬಳಿಯ ಕೀ ಬಳಸಿ ಭದ್ರತಾ ಕೊಠಡಿ ಬೀಗ ತೆಗೆದು ನೌಕರರಿಂದಲೇ ಒಎಂಆರ್ ಪ್ರತಿ ತಿದ್ದಿಸಿರುವುದು ಮೇಲ್ನೋಟಕ್ಕೆ ಸಾಕ್ಷ್ಯ ಲಭಿಸಿದೆ’ ಎಂದೂ ಸಿಐಡಿ ಮೂಲಗಳು ಹೇಳಿವೆ.

‘ಭದ್ರತಾ ಕೊಠಡಿಯಲ್ಲಿದ್ದ ಟ್ರಂಕ್‌ಗಳ ಕೆಲ ಬೀಗದ ಕೀಗಳು ಡಿವೈಎಸ್ಪಿ ಶಾಂತಕುಮಾರ್ ಮನೆಯಲ್ಲಿ ಪತ್ತೆಯಾಗಿದ್ದವು. ಎಡಿಜಿಪಿ ಅವರೇ ಡಿವೈಎಸ್ಪಿ ಮೂಲಕ ಕೊಠಡಿ ಬೀಗ ತೆಗೆಸಿರುವುದಕ್ಕೆ ಪುರಾವೆಗಳು ಇವೆ’ ಎಂದೂ ತಿಳಿಸಿವೆ.

‘ತಮ್ಮ ಮೇಲಿನ ಆರೋಪ ಅಲ್ಲಗೆಳೆಯುತ್ತಿರುವ ಎಡಿಜಿಪಿ, ಪ್ರಕರಣದಲ್ಲಿ ತಮ್ಮ ತಪ್ಪು ಇಲ್ಲವೆಂದೇ ವಾದಿಸುತ್ತಿದ್ದಾರೆ. ಆದರೆ, ಸೂಕ್ತ ಪುರಾವೆಗಳನ್ನು ಮುಂದಿಟ್ಟಾಗ ಮೌನವಾಗುತ್ತಿದ್ದಾರೆ. ಹೀಗಾಗಿ, ಡಿವೈಎಸ್ಪಿ ಹಾಗೂ ಇತರೆ ನೌಕರರ ಸಮ್ಮುಖದಲ್ಲೇ ಎಡಿಜಿಪಿ ವಿಚಾರಣೆ ನಡೆಸಿದರೆ ನಿಜಾಂಶ ತಿಳಿಯಲಿದೆ’ ಎಂದೂ ತಿಳಿಸಿವೆ.

ಬಂಧಿಸಲು ಹೆದರಿದ್ದ ಅಧಿಕಾರಿಗಳು?

‘ಪುರಾವೆಗಳು ಇದ್ದರೂ ಎಡಿಜಿಪಿ ಅವರನ್ನು ಬಂಧಿಸಲು ಸಿಐಡಿ ಅಧಿಕಾರಿಗಳೇ ಹೆದರಿದ್ದರು. ಹೀಗಾಗಿ, ನಾಲ್ಕು ಬಾರಿ ನೋಟಿಸ್ ನೀಡಬೇಕಾಯಿತು’ ಎಂದು ಮೂಲಗಳು ಹೇಳಿವೆ.

‘ಮೊದಲ ಬಾರಿ ವಿಚಾರಣೆಗೆ ಬಂದಿದ್ದಾಗಲೇ ಎಡಿಜಿಪಿ ಅವರನ್ನು ಬಂಧಿಸುವ ಉದ್ದೇಶ ಅಧಿಕಾರಿಗಳದ್ದಾಗಿತ್ತು. ಆದರೆ, ತಮಗಿಂತ ಉನ್ನತ ದರ್ಜೆ ಅಧಿಕಾರಿಯನ್ನು ಬಂಧಿಸುವುದು ಹೇಗೆ ಎಂದು ಚಿಂತೆಗೀಡಾಗಿದ್ದರು. ಮೂರು ಬಾರಿ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರೂ, ಬಂಧನದ ಬಗ್ಗೆ ತೀರ್ಮಾನ ಕೈಗೊಂಡಿರಲಿಲ್ಲ’ ಎಂದೂ ತಿಳಿಸಿವೆ.

‘ಪ್ರಕರಣದ ಬಗ್ಗೆ ಇತ್ತೀಚೆಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ಪಿಎಸ್‌ಐ ನೇಮಕಾತಿ ಅಕ್ರಮದ ಹಿಂದೆ ಯಾವುದೇ ಸಚಿವ, ಅಧಿಕಾರಿ ಅಥವಾ ಪ್ರಭಾವಿ ವ್ಯಕ್ತಿ ಇದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು’ ಎಂದಿತ್ತು. ಇದೇ ಕಾರಣಕ್ಕೆ ಸಿಐಡಿ ಡಿಜಿಪಿ ಪಿ.ಎಸ್. ಸಂಧು, ಐಜಿಪಿ ಉಮೇಶ್‌ಕುಮಾರ್ ನೇತೃತ್ವದ ತಂಡ, ನಾಲ್ಕನೇ ಬಾರಿ ಪೌಲ್‌ ಅವರನ್ನು ವಿಚಾರಣೆಗೆ ಕರೆಸಿ ಬಂಧಿಸಿದೆ. ಮತ್ತಷ್ಟು ಪ್ರಭಾವಿಗಳಿಗೂ ಗಾಳ ಹಾಕಿದೆ’ ಎಂದೂ ಹೇಳಿವೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ