Home / ರಾಜಕೀಯ / ಪೊಲೀಸರ ಜೊತೆ ವಾಗ್ವಾದ: ಲಿಂಬಾವಳಿ ಪುತ್ರಿಗೆ ₹ 10 ಸಾವಿರ ದಂಡ

ಪೊಲೀಸರ ಜೊತೆ ವಾಗ್ವಾದ: ಲಿಂಬಾವಳಿ ಪುತ್ರಿಗೆ ₹ 10 ಸಾವಿರ ದಂಡ

Spread the love

ಬೆಂಗಳೂರು: ಅತಿ ವೇಗವಾಗಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಜೊತೆಗೇ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ವಾಗ್ವಾದಕ್ಕೆ ಇಳಿದಿದ್ದು, ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಂದ ₹ 10 ಸಾವಿರ ದಂಡ ವಸೂಲಿ ಮಾಡಲಾಗಿದೆ.

‘ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಕಡೆಯಿಂದ ರಾಜಭವನ ಕಡೆಗೆ ಗುರುವಾರ ಕಾರಿನಲ್ಲಿ ಹೊರಟಿದ್ದ ಲಿಂಬಾವಳಿ ಪುತ್ರಿ, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು.

ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗೆ ₹ 1,000 ದಂಡ ಹಾಗೂ ಹಳೇ ಪ್ರಕರಣಗಳಿಗೆ ₹ 9,000 ದಂಡ ಕಟ್ಟಿಸಿಕೊಳ್ಳಲಾಗಿದೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಅತಿ ವೇಗದ ಚಾಲನೆಯಿಂದಾಗಿ ಅನುಮಾನ: ‘ಅತಿ ವೇಗವಾಗಿ ಹೊರಟಿದ್ದ ಕಾರನ್ನು ನೋಡಿದ್ದ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ, ಅನುಮಾನ ವ್ಯಕ್ತಪಡಿಸಿ ವೈರ್‌ಲೆಸ್‌ನಲ್ಲಿ ಸಂದೇಶ ರವಾನಿಸಿದ್ದರು. ಕಾರು ತಡೆಯುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಕ್ಯಾಪಿಟಲ್ ಹೋಟೆಲ್ ಬಳಿ ಕಾರು ಅಡ್ಡಗಟ್ಟಿದ ಕಾನೂನು ಮತ್ತು ಸುವ್ಯವಸ್ಥೆ ಸಿಬ್ಬಂದಿ, ಲಿಂಬಾವಳಿ ಪುತ್ರಿಯನ್ನು ಕಾರಿನಿಂದ ಕೆಳಗೆ ಇಳಿಸಿ ವಿಚಾರಿಸಿದರು.’

‘ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ ಪುತ್ರಿ, ‘ನಾನು ಯಾರು ಗೊತ್ತಾ? ಶಾಸಕ ಅರವಿಂದ ಲಿಂಬಾವಳಿ ಪುತ್ರಿ. ನನ್ನ ಬಳಿ ಚಾಲನಾ ಪರವಾನಗಿ ಪತ್ರ ಸೇರಿದಂತೆ ಎಲ್ಲ ದಾಖಲೆಗಳಿವೆ. ನನ್ನನ್ನು ತಡೆದರೆ ಪರಿಣಾಮ ನೆಟ್ಟಗಿರೊಲ್ಲ’ ಎಂದಿದ್ದರು. ಅತಿ ವೇಗವಾಗಿ ಕಾರು ಚಲಾಯಿಸಿದ್ದು ಯಾಕೆಂದು ಪೊಲೀಸರು ಪ್ರಶ್ನಿಸಿದ್ದರು. ಅದಕ್ಕೂ ಲಿಂಬಾವಳಿ ಪುತ್ರಿ ಉತ್ತರಿಸಲಿಲ್ಲ’ ಎಂದು ತಿಳಿಸಿದರು.

ದಂಡ ಪಾವತಿಸಿದ ಸ್ನೇಹಿತ: ‘ಕಬ್ಬನ್‌ ಪಾರ್ಕ್‌ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸಹ ಸ್ಥಳಕ್ಕೆ ಹೋಗಿದ್ದರು. ಅವರ ಜೊತೆಗೂ ಯುವತಿ ವಾಗ್ವಾದ ನಡೆಸಿದ್ದರು. ಸಮಾಧಾನಪಡಿಸಿದ್ದ ಇನ್‌ಸ್ಪೆಕ್ಟರ್, ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಹಳೇ ಪ್ರಕರಣಗಳನ್ನು ಪರಿಶೀಲಿಸಿದ್ದರು’ ಎಂದು ಅಧಿಕಾರಿ ಹೇಳಿದರು.

‘₹ 9,000 ದಂಡ ಬಾಕಿ ಇರುವುದು ಗೊತ್ತಾಗಿತ್ತು. ಜೊತೆಗೆ, ಹೊಸ ₹ 1,000 ದಂಡ ಸೇರಿಸಿ ರಶೀದಿಯನ್ನು ಯುವತಿಗೆ ನೀಡಿದ್ದರು. ದಂಡ ಪಾವತಿಸಲು ಒಪ್ಪದೆ ಮತ್ತೆ ವಾಗ್ವಾದ ಮಾಡಿದರು. ಲಿಂಬಾವಳಿ ಪುತ್ರಿ ಜೊತೆಗಿದ್ದ ಯುವಕ ಮಧ್ಯ ಪ್ರವೇಶಿಸಿ, ದಂಡ ಪಾವತಿಸಿದ. ನಂತರವೇ ಯುವತಿಯ ಕಾರನ್ನು ಪೊಲೀಸರು ಬಿಟ್ಟು ಕಳುಹಿಸಿದರು’ ಎಂದು ತಿಳಿಸಿದರು.

ಪುತ್ರಿ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅರವಿಂದ ಲಿಂಬಾವಳಿ ಲಭ್ಯರಾಗಲಿಲ್ಲ.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ