Breaking News
Home / ರಾಜಕೀಯ / ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ ಅವರೇ ಅನಿವಾರ್ಯ ,B.S.Y.ಗೆ ಶರಣಾದ B.J.P.

ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ ಅವರೇ ಅನಿವಾರ್ಯ ,B.S.Y.ಗೆ ಶರಣಾದ B.J.P.

Spread the love

ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ ಅವರೇ ಅನಿವಾರ್ಯ ಅಂತ ವರಿಷ್ಠರಿಗೆ ಮನವರಿಕೆಯಾಗಿದೆ. ಅವರ ಬೇಡಿಕೆಯಂತೆ ಪುತ್ರನಿಗೆ ಸೂಕ್ತ ಸ್ಥಾನಮಾನ ನೀಡಲು ಹೈಕಮಾಂಡ್ ಒಲವು ತೋರಿದೆ. ಈ ಮೂಲಕ ಹಲವು ದಶಕಗಳಿಂದ ಬಿಎಸ್‌ವೈ ಹಿಡಿತದಲ್ಲಿದ್ದು ಕೈ ತಪ್ಪಿ ಹೋಗಲಿದೆ ಎನ್ನುವಷ್ಟರಲ್ಲೇ ಮತ್ತೆ ರಾಜ್ಯ ಬಿಜೆಪಿ ಅವರ ತೆಕ್ಕೆಗೆ ಜಾರತೊಡಗಿದೆ. ಹೌದು. ವಿಜಯೇಂದ್ರ ಅವರ ಹೆಸರನ್ನು ರಾಜ್ಯ ಕೋರ್ ಕಮಿಟಿ ಪರಿಷತ್‌ಗೆ ಶಿಫಾರಸ್ಸು ಮಾಡುವುದರೊಂದಿಗೆ ಪಕ್ಷ ಯಡಿಯೂರಪ್ಪ ಅವರಿಗೆ ಶರಣಾಗಿದೆ. ವರಿಷ್ಠರು ಒಲವು ತೋರಿದ ಬಳಿಕವಷ್ಟೇ ಕೋರ್ ಕಮಿಟಿ ಈ ನಿರ್ಧಾರ ಕೈಗೊಂಡಿದೆ.

ರಾಜ್ಯದಲ್ಲಿ ದಶಕಗಳ ಕಾಲ ಓಡಾಡಿ, ಸಂಘಟನೆ ಮಾಡಿ ಪಕ್ಷವನ್ನು ಶೂನ್ಯದಿಂದ ಅಧಿಕಾರದ ಸನಿಹಕ್ಕೆ ತರುವಲ್ಲಿ ಬಿಎಸ್‌ವೈ ಪಾತ್ರ ಅನನ್ಯ. ಅಧಿಕಾರಕ್ಕೆ ತರುವುದರ ಜೊತೆಜೊತೆಗೆ ಪಕ್ಷದಲ್ಲಿಯೂ ಹಿಡಿತ ಸಾಧಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ವರಿಷ್ಠರು ಮತ್ತು ಪಕ್ಷದೊಳಗಿನ ಹಿತಶತ್ರುಗಳ ಚಿತಾವಣೆಗೆ ಬೇಸತ್ತು 2013 ರಲ್ಲಿ ಪಕ್ಷ ತೊರೆದು, ಬೇರೆ ಪಕ್ಷ ಕಟ್ಟಿ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಬಿಜೆಪಿಯನ್ನು ಮಟ್ಟ ಹಾಕುವಲ್ಲಿ ಸಫಲರಾಗಿದ್ದರು. ಅವರ ಹೊರತಾಗಿ ಪಕ್ಷ ಅಧಿಕಾರದ ಸನಿಹಕ್ಕೂ ಬರಲು ಸಾಧ್ಯವಿಲ್ಲ ಎಂದು ಸಾಬೀತು ಮಾಡಿದ್ದರು. ಒಂದೇ ವರ್ಷದಲ್ಲಿ ಮಾತೃಪಕ್ಷಕ್ಕೆ ಮರಳಿ, ಸಂಸದರಾಗಿ ಬಳಿಕ ಪಕ್ಷದ ಚುಕ್ಕಾಣಿ ಹಿಡಿದು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಮತ್ತೆ ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿದ್ದು ಇತಿಹಾಸ.

ಹಾಗೇ ನೋಡಿದರೆ 2008 ರಲ್ಲಿ ವಚನಭ್ರಷ್ಟತೆಯ ಸಹಾನುಭೂತಿ ಪಡೆದು ತಮ್ಮ ಸಮುದಾಯದ ಭಾರೀ ಬೆಂಬಲದೊಂದಿಗೆ ಚುನಾವಣೆ ಎದುರಿಸಿದರೂ ಬಿಜೆಪಿ ಸರಳ ಬಹುಮತ ಪಡೆಯಲಾಗಲಿಲ್ಲ. ಆದರೂ ಪಕ್ಷೇತರರ ನೆರವಿನಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದಾದ ಬಳಿಕವಂತೂ ಪಕ್ಷದಲ್ಲಿ ಅವರ ಹಿಡಿತ ಭದ್ರವಾಗಿ ಪ್ರಶ್ನಾತೀತ ನಾಯರಾಗಿ ನೆಲೆಯೂರಿದರು. ವೀರಶೈವ ಲಿಂಗಾಯತ ಸಮುದಾಯದ ಐಕಾನ್ ಆಗಿ ದೊಡ್ಡ ಸಮುದಾಯದ ಬಲದ ಜೊತೆಗೆ ಇನ್ನಿತರ ಹಲವು ವರ್ಗಗಳ ಒಡನಾಟ ಬೆಂಬಲದಿಂದ ಅವರ ಶಕ್ತಿ ದ್ವಿಗುಣವಾಯಿತು. 2018 ರಲ್ಲಿ ಮತ್ತೆ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಬಹುಮತವಿಲ್ಲದಿದ್ದರೂ, 2019 ರ ವೇಳೆಗೆ ಆಪರೇಷನ್ ಕಮಲದ ಮೂಲಕ ಗದ್ದುಗೆ ಏರಿದ್ದು ಇತಿಹಾಸ. 75 ವರ್ಷಕ್ಕಿಂತ ಹಿರಿಯರನ್ನು ಅಧಿಕಾರದಿಂದ ಹೊರಗಿಡುವ ಪಕ್ಷದ ಅಲಿಖಿತ ನಿಯಮ ಕೂಡ ಇವರಿಗೆ ಅನ್ವಯವಾಗಲಿಲ್ಲ. ಪಕ್ಷದ ಘಟಾನುಘಟಿ ನಾಯರಾದ ಎಲ್ ಕೆ ಅಡ್ವಾಣಿ, ಮುರಳಿಮನೋಹರ್ ಜೋಷಿ, ಸುಮಿತ್ರಾ ಮಹಾಜನ್ ಮೊದಲಾದವರಿಗೆ ಅನ್ವಯವಾದ ಈ ನಿಯಮ ಬಿಎಸ್‌ವೈ  ಮಟ್ಟಿಗೆ ಕಾರ್ಯಗತವಾಗಲಿಲ್ಲ. ಇದು ಅವರು ರಾಜ್ಯ ಬಿಜೆಪಿಯ ಮಟ್ಟಿಗೆ ಎಷ್ಟು ಪ್ರಭಾವಿ ಎಂಬುದನ್ನು ತೋರಿಸಿ ಕೊಟ್ಟಿತ್ತು. ಅದರ ಪರಿಣಾಮವೇ ಅವರನ್ನು ಮುಟ್ಟುವ ಎದೆಗಾರಿಕೆ ವರಿಷ್ಠರಿಗೆ ಇರಲಿಲ್ಲ ಎನ್ನುವುದು ವಾಸ್ತವ. ಯಡಿಯೂರಪ್ಪ ಅವರ ವಿರೋಧ ಕಟ್ಟಿಕೊಂಡು ರಾಜ್ಯದಲ್ಲಿ ಪಕ್ಷದ ನೆಲೆ ವಿಸ್ತರಿಸುವುದು ಅಸಾಧ್ಯ ಎಂಬ ಅರಿವು ವರಿಷ್ಠರಿಗೆ ಇತ್ತು. ಹಾಗಾಗಿಯೇ ಅವರ ಪದಚ್ಯುತಿ ಪ್ರಕ್ರಿಯೆ ವಿಳಂಬವಾಯಿತು.

bjp meeting bs yediyurppa basvaraj bommai nalin kumar kateel

ಯಡಿಯೂರಪ್ಪ ಮುಂದಿಟ್ಟ ಷರತ್ತುಗಳನ್ನು ಒಪ್ಪಿದ ಹೈಕಮಾಂಡ್ ನಾಯಕರು, ತಮ್ಮ ಪಟ್ಟುಗಳನ್ನು ಉಪಯೋಗಿಸಿ ಜಾಣತನದಿಂದ ಕೊನೆಗೂ ಅವರ ಮನವೊಲಿಸಿ ಸಿಎಂ ಗಾದಿಯಿಂದ ಇಳಿಸಿದರು. ಪುತ್ರ ವಿಜಯೇಂದ್ರಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕೊಡಿಸಿ ಭವಿಷ್ಯವನ್ನು ಭದ್ರಗೊಳಿಸಬೇಕೆಂಬುದು ಮಾತ್ರ ಅವರ ಬೇಡಿಕೆಯಾಗಿತ್ತು.

ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಹೈಕಮಾಂಡ್ ಬೇರೆ ಲೆಕ್ಕಾಚಾರದಲ್ಲಿತ್ತು. ಪಕ್ಷವನ್ನು ವ್ಯಕ್ತಿಯೊಬ್ಬರ ಅವಲಂಬನೆಯಿಂದ ಹೊರತಂದು, ಸಂಘಟನೆ ಮೂಲಕವೇ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶ ವರಿಷ್ಠರದ್ದಾಗಿತ್ತು. 


Spread the love

About Laxminews 24x7

Check Also

ವೈದ್ಯರ ಸಹಾಯ ಪಡೆಯಲು ನಿರಾಕರಣೆ: ಕೇಜ್ರಿವಾಲ್‌ ಸಾವಿಗೆ ಪಿತೂರಿ; ಎಎಪಿ ಆರೋಪ

Spread the love ನವದೆಹಲಿ: ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಇನ್ಸುಲಿನ್‌ ಪಡೆಯಲು ಮತ್ತು ವೈದ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ