Breaking News
Home / ಜಿಲ್ಲೆ / ಮೈಸೂರ್ / ಮೈಸೂರಿನಲ್ಲಿ ಮತ್ತೆ ‘ಅಂಬಾರಿ’ ಸಂಚಾರ ಆರಂಭ

ಮೈಸೂರಿನಲ್ಲಿ ಮತ್ತೆ ‘ಅಂಬಾರಿ’ ಸಂಚಾರ ಆರಂಭ

Spread the love

ಮೈಸೂರು, ಸೆ.1- ಪ್ರವಾಸಿಗರಿಗೆ ಸಂತಸದ ಸುದ್ದಿ. ಪ್ರವಾಸೋದ್ಯಮ ಇಲಾಖೆಯ ಡಬಲ್ ಡೆಕ್ಕರ್ `ಅಂಬಾರಿ’ ಬಸ್‍ನಲ್ಲಿ ಕುಳಿತು ಮೈಸೂರು ನಗರದ ಪ್ರವಾಸಿ ತಾಣಗಳಿಗೊಂದು ಸುತ್ತು ಹೊಡೆಯುವ ಕಾಲ ಮತ್ತೆ ಕೂಡಿ ಬಂದಿದೆ. ಸೆ.4ರಂದು ಬಸ್ ಸಂಚಾರ ಆರಂಭಿಸಲಿದ್ದು, ಮತ್ತೆ ಪ್ರವಾಸೋದ್ಯಮ ಚಿಗುರೊಡೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಬಸ್ ಧೂಳು ಹಿಡಿದು ನಿಲ್ಲುವಂತಾಗಿತ್ತು.

ಇದೀಗ ಧೂಳು ಕೊಡವಿ ಸಂಚಾರಕ್ಕೆ ಎದ್ದು ನಿಂತಿದೆ. ಆಗಸ್ಟ್ ತಿಂಗಳಿನಲ್ಲಿಯೇ ಅಂಬಾರಿ ಬಸ್ ಸಂಚಾರ ಆರಂಭಿಸುವ ಕುರಿತ ಮಾತುಗಳು ಕೇಳಿ ಬಂದಿತ್ತಾದರೂ ಸಂಚಾರ ಆರಂಭವಾಗಿರಲಿಲ್ಲ. ಇದೀಗ ಮತ್ತೊಮ್ಮೆ ಸಂಚಾರ ಆರಂಭಿಸುವ ಕುರಿತಂತೆ ಅಧಿಕೃತ ಮಾಹಿತಿಗಳು ಬಂದಿವೆ. ಡಬಲ್ ಡೆಕ್ಕರ್ ಅಂಬಾರಿ ಬಸ್ 25 ಅಡಿಗಳಷ್ಟು ಎತ್ತರ ಇರುವ ಕಾರಣ ಸಂಚಾರಕ್ಕೆ ಅಡಚಣೆಯಾಗದಂತೆ ಈ ಹಿಂದೆಯೇ ಬಸ್ ಸಂಚರಿಸುವ ಮಾರ್ಗದಲ್ಲಿದ್ದ ಬಾಗಿಕೊಂಡಿದ್ದ ಮರಗಳ ಕೊಂಬೆಯನ್ನು ಕತ್ತರಿಸಿ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.

ಆದರೆ ಕೊರೊನಾ ಕಾರಣದಿಂದ ಬಸ್ ರಸ್ತೆಗೆ ಇಳಿದಿರಲಿಲ್ಲ. ಇದೀಗ ಸೆ.4ರಿಂದ ಬೆಳಿಗ್ಗೆ 9.30 ರಿಂದ ಸಂಜೆ 5.30ರವರೆಗೆ ನಗರದಲ್ಲಿ ಅಂಬಾರಿ ಬಸ್ ಸಂಚರಿಸಲಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ ತಿಳಿಸಿದ್ದು, ಬಸ್ ಸಂಚಾರದ ಮಾರ್ಗಗಳ ವಿವರಗಳನ್ನು ನೀಡಿದ್ದಾರೆ.

ಡಬಲ್ ಡೆಕ್ರ್ಕ ಅಂಬಾರಿ ಬಸ್ ನಗರದ ಪ್ರವಾಸೋದ್ಯಮ ಇಲಾಖೆಯ ಆವರಣ (ಹೋಟೆಲ್ ಮಯೂರ ಹೊಯ್ಸಳ) ದಿಂದ ಹೊರಡಲಿದ್ದು, ನಗರದ ಜಿಲ್ಲಾಧಿಕಾರಿ ಕಚೇರಿ, ಕುಕ್ಕರಹಳ್ಳಿಕೆರೆ, ಮೈಸೂರು ವಿಶ್ವವಿದ್ಯಾನಿಲಯ, ರಾಮಸ್ವಾಮಿ ಸರ್ಕಲ್ , ಸಂಸ್ಕೃತಪಾಠಶಾಲೆ, ಕೆ.ಆರ್.ಸರ್ಕಲ್ ದೊಡ್ಡಗಡಿಯಾರ, ಅರಮನೆ ದಕ್ಷಿಣದ್ವಾರ, ಹಾರ್ಡಿಂಗ್ ಸರ್ಕಲ್, ಮೃಗಾಲಯ, ಕಾರಂಜಿಕೆರೆ, ಗೌರ್ಮೆಂಟ್ ಗೆಸ್ಟ ಹೌಸ್, ಸಂತ ಫಿಲೋಮಿನಾ ಚರ್ಚ್, ಬನ್ನಿಮಂಟಪ, ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್, ರೈಲ್ವೆ ನಿಲ್ದಾಣದ ಮೂಲಕ ಹೊರಟ ಸ್ಥಳ ಹೋಟೆಲ್ ಮಯೂರ ಹೊಯ್ಸಳವನ್ನು ತಲುಪಲಿದೆ.

ಬೆಂಗಳೂರಿನ ಕೆಎಂಎಸ್ ಬಸ್ ಕವಚ ನಿರ್ಮಾಣ ಸಂಸ್ಥೆ ತಯಾರಿಸಿದ ಈ ಬಸ್ ನಲ್ಲಿ ಮೇಲೆ ಮತ್ತು ಕೆಳಗೆ ಸೇರಿ 40 ಆಸನಗಳಿವೆ. ಸುಮಾರು 25 ಅಡಿಯಷ್ಟು ಎತ್ತರವಿದೆ. ಬಸ್ ಸಂಚರಿಸುವ ವೇಳೆ ಆಯಾಯ ಸ್ಥಳಗಳು ಬಂದಾಗ ಅದರ ಪರಿಚಯ ಬಸ್‍ನಲ್ಲಿ ಸಂಚರಿಸುವ ಪ್ರವಾಸಿಗರಿಗೆ ಮಾಡಿಕೊಡಲಾಗುತ್ತದೆ. ಮೇಲಿನ ಮಹಡಿ ತೆರೆದಿದ್ದರೆ ಕೆಳಗಿನ ಮಹಡಿ ಹವಾ ನಿಯಂತ್ರಿತವಾಗಿದ್ದು, ಸಿಸಿಟಿವಿ ಸೇರಿದಂತೆ ಎಲ್ಲ ಸೌಲಭ್ಯಗಳು ಇದರಲ್ಲಿದೆ. ಡಬಲ್ ಡೆಕ್ಕರ್ ಅಂಬಾರಿ ಸಂಚರಿಸಲು ಬಯಸುವವರು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ದೂರವಾಣಿಸಂಖ್ಯೆ (0821-2423652) ಕರೆ ಮಾಡಿ ಪಡೆಯಬಹುದು.


Spread the love

About Laxminews 24x7

Check Also

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ: ಶ್ಯಾಮ್‌ಸುಂದರ್‌ ಗಾಯಕವಾಡ್

Spread the loveಬೆಂಗಳೂರು: ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ’ ಎಂದು ಬಿಜೆಪಿ ರಾಜ್ಯ ಒಬಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ