ಬೆಳಗಾವಿ – ಲಕ್ಷ್ಮಿ ತಾಯಿ ಫೌಂಡೇಶನ್ ಹಿಂದಿನಿಂದಲೂ ಬಡವರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು, ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರ್ಕಂಡೇಯ ನಗರ, ವಾಲ್ಮೀಕಿ ನಗರ ಹಾಗೂ ಕಲ್ಯಾಣಹಟ್ಟಿ ಪ್ರದೇಶಗಳ ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ ಹಾಗೂ ನಿರ್ಗತಿಕರಿಗೆ ರೇಷನ್ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಲಕ್ಷ್ಮಿ ತಾಯಿ ಫೌಂಡೇಶನ್ ಕೇವಲ ಕೊರೋನಾ ಸಂದರ್ಭದಲ್ಲಿ ಜನರ ಸೇವೆ ಮಾಡುತ್ತಿಲ್ಲ. ಈ ಹಿಂದೆ ಪ್ರವಾಹ ಬಂದಾಗಲೂ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದೆ. ಸಂಕಷ್ಟಕ್ಕೊಳಗಾದವರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿದೆ. ದಿನದ 24 ಗಂಟೆ, ವರ್ಷದ 365 ದಿನವೂ ಜನರ ಸೇವೆಗಾಗಿ ಮುಡಿಪಾಗಿದೆ ಎಂದು ಅವರು ತಿಳಿಸಿದರು.
ನನ್ನನ್ನು ಮೊದಲ ಬಾರಿಗೆ ಶಾಸಕಳನ್ನಾಗಿ ನೀವು ಆಯ್ಕೆ ಮಾಡಿದ್ದೀರಿ. ಕ್ಷೇತ್ರವನ್ನು ಮಾದರಿಯನ್ನಾಗಿಸುವ ಕನಸು ಹೊತ್ತು ನಾನು ಕೆಲಸ ಆರಂಭಿಸಿದೆ. ಕೋಟಿ ಕೋಟಿ ಹಣ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡೆ. ಆದರೆ ಅದೇ ವೇಳೆ ಹಿಂದೆಂದೂ ಕಂಡರಿಯದ ಪ್ರವಾಹ ಅಪ್ಪಳಿಸಿ ನಮ್ಮನ್ನು ಪರೀಕ್ಷೆಗೆ ನೂಕಿತು. ಆದರೆ ನಿಮ್ಮೆಲ್ಲರ ಸಹಕಾರದಿಂದ ಅದನ್ನು ಯಶಸ್ವಿಯಾಗಿ ಎದುರಿಸಲಾಯಿತು. ಮತ್ತೊಮ್ಮೆ ಕ್ಷೇತ್ರವನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡೆ. ಆದರೆ ಈ ಬಾರಿ ಕೊರೋನಾ ಮತ್ತೆ ನಮ್ಮನ್ನು ಸಂಕಷ್ಟಕ್ಕೆ ನೂಕಿತು. ಆದರೆ ಈಗಲೂ ನಾವು ದೃತಿಗೆಡಬೇಕಾಗಿಲ್ಲ. ಎಲ್ಲರೂ ಒಂದಾಗಿ ಎದುರಿಸೋಣ. ಇದರಲ್ಲಿ ನಾವು ಗೆದ್ದು ಬಂದು ಮತ್ತೆ ಬದುಕು ಕಟ್ಟಿಕೊಳ್ಳೋಣ ಎಂದು ಲಕ್ಷ್ಮಿ ಹೆಬ್ಬಾಳಕರ್ ಧೈರ್ಯ ತುಂಬಿದರು.
ತೀರಾ ಹಿಂದುಳಿದಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಕಟ್ಟುವ ನನ್ನ ಕನಸು ಕಮರಿಲ್ಲ. ಅದು ಎಂದಿಗೂ ಕಮರಲು ನೀವು ಅವಕಾಶ ನೀಡುವುದಿಲ್ಲ ಎನ್ನುವ ವಿಶ್ವಾಸವಿದೆ. ಎಂತಹ ಸಂದರ್ಭ ಬಂದರೂ ಎದೆಗುಂದದೆ ಮುನ್ನುಗ್ಗೋಣ. ಕ್ಷೇತ್ರದ ಜನರು, ದೇವರು ನನ್ನ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ನೀವೆಲ್ಲ ತಾಳ್ಮೆಯಿಂದ ಸಹಕಾರ ನೀಡುತ್ತಿರುವುದಕ್ಕೆ ನಾನು ಸದಾ ಋಣಿಯಾಗಿರುತ್ತೇನೆ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎಂದು ಅವರು ಭಾವುಕರಾಗಿ ನುಡಿದರು.
ಮೃಣಾಲ್ ಹೆಬ್ಬಾಳಕರ್ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.