ಕಾರವಾರ: ಲಂಚದ ಆಸೆಗೆ ಬಿದ್ದ ಪೊಲೀಸರು ಇಲಾಖೆ ಜೀಪಿನಲ್ಲಿಯೇ ಕೆಲವರನ್ನು ಗಡಿದಾಟಿಸಲು ಮುಂದಾಗಿ ಟಾಸ್ಕ್ ಪೋರ್ಸ್ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಇಂತಹದೊಂದು ಘಟನೆ ನಡೆದಿರುವುದು ಕುಮಟಾ ತಾಲೂಕಿನ ಗೋಕರ್ಣದಲ್ಲಿ. ಕೆಲ ದಿನಗಳ ಹಿಂದೆ ಗೋಕರ್ಣದಿಂದ ಹುಬ್ಬಳ್ಳಿಗೆ ತೆರಳಿದ ಮೂವರು ಜೆಸಿಬಿ ಡ್ರೈವರ್ಗಳು ಲಾಕ್ ಡೌನ್ನಿಂದಾಗಿ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ಆದರೆ ಮರಳಿ ಬರಲು ಯೋಚಿಸುತ್ತಿರುವಾಗ ಹುಬ್ಬಳ್ಳಿ ಠಾಣೆಯೊಂದರ ಪೊಲೀಸರೊಂದಿಗೆ ವ್ಯವಹಾರ ಕುದುರಿಸಿದ್ದಾರೆ.
ಅದರಂತೆ ಒಪ್ಪಿದ ಅಧಿಕಾರಿಗಳು ತಮ್ಮದೇ ಜೀಪಿನಲ್ಲಿ ಮೂವರನ್ನು ಮಹಿಳಾ ಪೇದೆಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಗೋಕರ್ಣದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಚಿಸಲಾದ ಪಂಚಾಯತ್ ಅಧ್ಯಕ್ಷ, ಮಾಜಿ ಅಧ್ಯಕ್ಷ, ನೋಡೆಲ್ ಅಧಿಕಾರಿ, ಪೊಲೀಸರನ್ನೊಳಗೊಂಡ ಟಾಸ್ಕ್ ಪೋರ್ಸ್ ತಂಡ ತಪಾಸಣೆ ನಡೆಸುವಾಗ ಅನುಮಾನಗೊಂಡು ವಿಚಾರಿಸಿದಾಗ ಬಾಯ್ಬಿಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಪೊಲೀಸ್ ಸಿಬ್ಬಂದಿಗೆ ಹಣ ನೀಡಿ ಜಿಲ್ಲೆಗೆ ಪೊಲೀಸ್ ವಾಹನದಲ್ಲಿ ಬಂದಿರುವುದಾಗಿ ಡ್ರೈವರ್ಗಳು ಒಪ್ಪಿಕೊಂಡಿದ್ದಾರೆ. ಬಳಿಕ ಡ್ರೈವರ್ ಆಗಿ ಬಂದ ಪೇದೆಯನ್ನು ವಿಚಾರಿಸಿದ್ದು ಅಧಿಕಾರಿಗಳು ಕಳುಹಿಸಿರುವುದರಿಂದ ಬಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಇದೀಗ ಪೊಲೀಸ್ ಸಹಿತ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ