ಬೆಂಗಳೂರು: ಕೆಪಿಎಸ್ಸಿ ನೇಮಕಾತಿಯಲ್ಲಿ ಹಗರಣ ಪ್ರಕರಣ ಸಂಬಂಧ ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ 4ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
ಇಂದು ಬಸವರಾಜ್ ಕನ್ನಾಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಇಡಿ ಮನವಿ ಮಾಡಿದೆ. ಇಡಿ ಅಧಿಕಾರಿಗಳ ಮನವಿ ಪುರಸ್ಕರಿಸಿದ 4ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್ ಬಸವರಾಜ್ ಕನ್ನಾಳೆಯನ್ನು 14 ದಿನ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಆರೋಪಿ ಬಸವರಾಜ್ ಕನ್ನಾಳೆ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದ ಹಣದ ವ್ಯವಹಾರದ ಮಾಹಿತಿ ಇಡಿ ತನಿಖೆ ವೇಳೆ ಬಯಲಾಗಿದೆ. ಎಂಟು ಅಭ್ಯರ್ಥಿಗಳಿಂದ ಬರಬೇಕಿದ್ದ ಹಣದ ಬಗ್ಗೆ ಡೈರಿಯಲ್ಲಿ ಕನ್ನಾಳೆ ಉಲ್ಲೇಖಿಸಿದ್ದಾನೆ. ಮಂಜುನಾಥ್, ಪೂಜಾ, ಅಶ್ವಿನಿ ಕುಮಾರ್, ಮೋಹನ್ ಕುಮಾರ್, ಸಂಗಮೇಶ್, ಪದ್ಮಾವತಿ ಮತ್ತು ಹರೀಶ್ ಸೇರಿದಂತೆ ಹಲವರ ಹೆಸರುಗಳನ್ನು ಡೈರಿಯಲ್ಲಿ ನಮೂದಿಸಿರುವುದು ಪತ್ತೆಯಾಗಿದೆ.
ಮಂಜುನಾಥ್, ಪೂಜಾ, ಅಶ್ವಿನಿ ಕುಮಾರ್, ಸಂಗಮೇಶ್, ಪದ್ಮಾವತಿ, ಹರೀಶ್ ಅವರಿಂದ ತಲಾ 10 ಲಕ್ಷ ರೂ. ಹಾಗೂ ಮೋಹನ್ ಕುಮಾರ್ ಅವರಿಂದ 5 ಲಕ್ಷ ರೂ. ಬಾಕಿ ಬರಬೇಕೆಂದು ಡೈರಿಯಲ್ಲಿ ದಾಖಲಿಸಿದ್ದಾನೆ. 20ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಮೂರು ವಿಲ್ಲಾಗಳನ್ನು ಬುಕ್ ಮಾಡಿದ್ದ ಸಂಗತಿಯೂ ತನಿಖೆಯಿಂದ ಬಹಿರಂಗವಾಗಿದೆ.
ಕೆಪಿಎಸ್ಸಿ ಹಗರಣದ ಸೂತ್ರಧಾರ ಬಸವರಾಜ್ ಕನ್ನಾಳೆ ಆಗಿದ್ದರು. ಪಶು ವೈದ್ಯಾಧಿಕಾರಿ ಹುದ್ದೆಗಳ ಆಕಾಂಕ್ಷಿಗಳಿAದ ಕನ್ನಾಳೆ 1.5 ಕೋಟಿ ರೂ. ಸಂಗ್ರಹ ಮಾಡಿದ್ದರು. ಆ ಹಣದ ಪೈಕಿ, 1.3 ಕೋಟಿಯನ್ನು ಐಎಎಸ್ ಅಧಿಕಾರಿ ಗ್ಯಾನೇಂದ್ರಗೆ ನೀಡಿರುವುದು ತನಿಖೆ ವೇಳೆ ಬಯಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7