ಬೆಂಗಳೂರು: ನಾನು ಯಾವುದೇ ಕಾನ್ವೆಂಟ್‌ನಲ್ಲಿ ಓದಿಲ್ಲ. ನಾನು ಓದಿದ್ದು ಅದಮಾರು ಮಠದ ಶಾಲೆಯಲ್ಲಿ ಎಂದು ಹೇಳುವ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಜೆಡಿಎಸ್ ಮಾಜಿ ಶಾಸಕ ಅನ್ನದಾನಿ ಅವರಿಗೆ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಹುಟ್ಟುತ್ತಲೇ ಸೂಟು-ಬೂಟು ಹಾಕಿಕೊಂಡು ಬೆಳೆದವರು ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಕಾನ್ವೆಂಟ್‌ನಲ್ಲಿ ಓದಿಲ್ಲ. ನಮ್ಮ ತಂದೆ ಕಷ್ಟಪಟ್ಟು ದುಡಿದು ನಮ್ಮನ್ನು ಓದಿಸಿದ್ದಾರೆ. ಈಗ ನಾನು ನನ್ನ ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದೇನೆ. ಪ್ರತಿಯೊಂದು ಕುಟುಂಬದಲ್ಲೂ ತಂದೆಯಾದವನೇ ಎಲ್ಲ ಜವಾಬ್ದಾರಿ ನಿಭಾಯಿಸಬೇಕು, ಬೇರೆಯವರು ಬಂದು ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಅನ್ನದಾನಿ ಅವರ ತಂದೆ ಸರಿಯಾಗಿ ದುಡಿದಿಲ್ಲ ಎಂದರೆ ನಾನೇನು ಮಾಡಲು ಸಾಧ್ಯ. ಅವರಿಗೆ ಈಗ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಗಾಳಿ ಸೋಕಿದೆ, ಅದಕ್ಕಾಗಿಯೇ ಈ ರೀತಿ ಮಾತನಾಡುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೇರವಾಗಿ ಮಾತನಾಡಲು ಆಗುತ್ತಿಲ್ಲ, ಅದಕ್ಕಾಗಿ ಅನ್ನದಾನಿ ಹಾಗೂ ಅಶ್ವಿನ್ ಅವರನ್ನು ಛೂ ಬಿಟ್ಟಿದ್ದಾರೆ. ಅನ್ನದಾನಿ ಮತ್ತು ಅಶ್ವಿನ್ ಅವರೇ, ಕುಮಾರಸ್ವಾಮಿ ಅವರ ಹಿಂದೆ ಹೋಗಿ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ವ್ಯಂಗ್ಯವಾಡಿದರು.
ಅನ್ನದಾನಿ ಹೇಳಿದ್ದೇನು?
ಕೆಪಿಎಸ್‌ಸಿ (KPSC) ಪರೀಕ್ಷೆಯ ಒಎಂಆರ್ (OMR) ಶೀಟ್ ತಿರುಚಿದ ಆರೋಪದ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದ ಅನ್ನದಾನಿ,” ಪ್ರಿಯಾಂಕ್ ಖರ್ಗೆ ಹುಟ್ಟಿದ ತಕ್ಷಣವೇ ಸೂಟು-ಬೂಟು, ಟೈ ಹಾಕಿ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಕಾನ್ವೆಂಟ್‌ಗೆ ಕಳುಹಿಸಿದ್ದರು. ಆದರೆ, ಹರಿದ ಚಡ್ಡಿ ಹಾಕಿಕೊಂಡು ಅತ್ಯಂತ ಬಡತನದ ಕಠಿಣ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗುತ್ತಿದ್ದ ನನ್ನಂತಹ ಸಾಮಾನ್ಯ ದಲಿತ ಯುವಕನನ್ನು ಶಾಸಕನನ್ನಾಗಿ ಮಾಡಿದ್ದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ. ಹೀಗಾಗಿ ಕುಮಾರಸ್ವಾಮಿ ಗ್ರೇಟ್” ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ನಾಯಕರು ಸರಳತೆ ಮೈಗೂಡಿಸಿಕೊಂಡು ಜನರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದ್ದರು.
Laxmi News 24×7