ಬಾಗಲಕೋಟ: ಹಿಂದಿ ನಮ್ಮ ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿದ್ದು, ಹಿಂದಿಯನ್ನು ದೇವನಾಗರಿ ಲಿಪಿಯಲ್ಲಿ ಗುರುತಿಸಿದೆ ಎಂದು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್. ದೇಶಪಾಂಡೆ ಹೇಳಿದರು.
ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಹಿಂದಿ ದಿನಾಚರಣೆ, ವಿಶೇಷ ಉಪನ್ಯಾಸ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಕೇವಲ ಪಠ್ಯ ವಿಷಯವಾಗಿ ನೋಡದೆ, ಸಂವಹನದ ಮಾಧ್ಯಮವಾಗಿಯೂ ಬಳಸಬೇಕು. ಹಿಂದಿ ಕಲಿಯುವುದರ ಜೊತೆಗೆ ಕನ್ನಡ ಸೇರಿದಂತೆ ದೇಶದ ಎಲ್ಲ ಭಾಷೆಗಳನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭಾಷೆ ಸಂಸ್ಕೃತಿ ಹಾಗೂ ಏಕತೆಯ ಪ್ರತೀಕವಾಗಿದೆ. ಭಾಷೆ ಕೇವಲ ಸಂವಹನದ ಸಾಧನವಲ್ಲ; ಅದು ಒಂದು ಸಮಾಜದ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಿಂದಿಯೊಂದಿಗೆ ಕನ್ನಡ ಸೇರಿದಂತೆ ಭಾರತದ ಎಲ್ಲ ಭಾಷೆಗಳನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ಭಾಷೆಯನ್ನು ಮತ್ತೊಂದು ಭಾಷೆಗಿಂತ ಮೇಲು ಅಥವಾ ಕೀಳು ಎಂದು ಪರಿಗಣಿಸದೆ, ಪ್ರತಿಯೊಂದು ಭಾಷೆಯ ವೈಶಿಷ್ಟ್ಯವನ್ನು ಅರಿತು ಗೌರವಿಸಬೇಕು ಎಂದರು.
ಪ್ರಾಚಾರ್ಯ ಎಸ್.ಆರ್. ಮುಗನೂರಮಠ ಮಾತನಾಡಿ, ಪುಸ್ತಕಗಳ ನಿಜವಾದ ಮೌಲ್ಯವನ್ನು ಜ್ಞಾನದಿಂದ ಅಳೆಯಲಾಗುತ್ತದೆ. ವಿದ್ಯಾರ್ಥಿಗಳು ಕನ್ನಡದಿಂದ ಹಿಂದಿಗೆ ಹಾಗೂ ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಹಿಂದಿ ಸುಂದರ ಹಾಗೂ ಮಧುರ ಭಾಷೆಯಾಗಿದ್ದು, ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಭಾಷೆಯನ್ನು ಶುದ್ಧರೂಪದಲ್ಲಿ ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅಧ್ಯಯನದ ಸಮಯದಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೆ ಏಕಾಗ್ರತೆಯಿಂದ ಓದಬೇಕು. ಭಾಷೆಗೆ ಯಾವುದೇ ಗಡಿಯಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ ಸಂಯೋಜಕ ಡಾ. ಅಪ್ಪು ರಾಠೋಡ, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಮಂಜುಳಾ ಚವ್ಹಾಣ, ಪ್ರಾಧ್ಯಾಪಕ ಡಾ. ಎಂ.ಬಿ. ಜಮಾದಾರ, ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದಿ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಮನರಂಜನಾ ಆಟಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ‘ನೀ ದ ಬಾಲ್’, ‘ನೆಕ್ ದ ಬಾಲ್’, ‘ಸ್ಮರಣೆ’, ‘ಮ್ಯೂಸಿಕಲ್ ಚೇರ್’, ‘ಲೆಗ್ ದ ಜಿಲೇಬಿ’ ಹಾಗೂ ‘ರೌಂಡ್ ದ ಸ್ಟಂಪ್’ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗುವ ಉದ್ದೇಶದಿಂದ NEET ಹಾಗೂ KSET ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪುಸ್ತಕದಲ್ಲಿ ವಿಷಯಗಳ, ಪ್ರಶ್ನೋತ್ತರಗಳು ಹಾಗೂ ಅಭ್ಯಾಸಕ್ಕೆ ಅಗತ್ಯವಾದ ಮಾಹಿತಿಯನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಪುಸ್ತಕವನ್ನು ಸದುಪಯೋಗಪಡಿಸಿಕೊಳ್ಳಬೇಕು.
Laxmi News 24×7