ನವದೆಹಲಿ: ಕೊರೊನಾ ಬಂದ ಮೇಲೆ ಬಿಸಿನೆಸ್‍ಗಳು ನೆಲ ಕಚ್ಚಿದೆ. ದೇಶದ ಆರ್ಥಿಕತೆಯ ಮೇಲೆ ಭಾರೀ ಪೆಟ್ಟಾಗಿದೆ. ಈ ಸಂದರ್ಭದಲ್ಲಿ ‘ಹೆಲಿಕಾಪ್ಟರ್ ಮನಿ’ಯನ್ನು ಜಾರಿಗೊಳಿಸಿದರೆ ದೇಶದ ಆರ್ಥಿಕತೆ ಮೇಲಕ್ಕೆ ಎತ್ತಬಹುದು ಎನ್ನುವ ದೇಶದಲ್ಲಿ ಚರ್ಚೆ ಜೋರಾಗಿ ಆರಂಭಗೊಂಡಿದೆ.
ಹೌದು. ಕುಸಿಯುತ್ತಿರುವ ಆರ್ಥಿಕತೆಯನ್ನು ದಿಢೀರ್ ಮೇಲಕ್ಕೆ ಎತ್ತುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಆದರೆ ‘ಹೆಲಿಕಾಪ್ಟರ್ ಮನಿ’ಯನ್ನು ಜಾರಿಗೆ ತಂದರೆ ಇದಕ್ಕೆ ಪರಿಹಾರ ಸಿಗಬಹುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕೆಸಿಆರ್ ಈ ಸಲಹೆ ನೀಡಿದ್ದೇ ತಡ ದೇಶವ್ಯಾಪಿ ‘ಹೆಲಿಕಾಪ್ಟರ್ ಮನಿ’ ಬಗ್ಗೆ ಚರ್ಚೆ ನಡೆಯುತ್ತಿದೆ.
ಏನಿದು ಹೆಲಿಕಾಪ್ಟರ್ ಮನಿ?
ಹೆಲಿಕಾಪ್ಟರ್ ಮೂಲಕ ಹಣವನ್ನು ಉದುರಿಸುವ ಕಲ್ಪನೆಗೆ ಹೆಲಿಕಾಪ್ಟರ್ ಮನಿ ಎಂದು ಕರೆಯಲಾಗುತ್ತದೆ. ಸುಲಭವಾಗಿ ಜನರಿಗೆ ತನ್ನ ಆರ್ಥಿಕ ನೀತಿಯ ಕಲ್ಪನೆ ಅರ್ಥವಾಗಲೆಂದು ಅಮೆರಿಕಾದ ಅರ್ಥಶಾಸ್ತ್ರಜ್ಞ ಮಿಲ್ಟನ್ ಫ್ರೈಡ್‍ಮ್ಯಾನ್ ಈ ಹೆಸರನ್ನು ನೀಡಿದ್ದಾರೆ. ಹೆಲಿಕಾಪ್ಟರ್ ನಿಂದ ಹಣವನ್ನು ಉದುರಿಸುವುದು ಅಂದರೆ ನಿಜ ಅರ್ಥದಲ್ಲಿ ಮೇಲಿನಿಂದ ಹಣ ಹಾಕುವುದಲ್ಲ. ಹೆಚ್ಚಿನ ಪ್ರಮಾಣದಲ್ಲಿ ಕರೆನ್ಸಿ ನೋಟುಗಳನ್ನು ಮುದ್ರಿಸಿ ಜನರ ಕೈಗೆ ಸಿಗುವುಂತೆ ಮಾಡುವುದೇ ಈ ಕಲ್ಪನೆಯ ತಿರುಳು.
ಆರ್‌ಬಿಐ ಭಾರೀ ಪ್ರಮಾಣದಲ್ಲಿ ಹಣವನ್ನು ಮುದ್ರಿಸಿ ಕೇಂದ್ರ ಸರ್ಕಾರಕ್ಕೆ ನೀಡಬೇಕು. ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣ ನೀಡುವುದರ ಜೊತೆ ಜನರ ಕೈಗೆ ಹಣ ತಲುಪುವಂತೆ ಮಾಡಬೇಕು. ಈ ರೀತಿ ದಿಢೀರ್ ಆಗಿ ಹಣದ ಹೊಳೆ ಹರಿದಾಗ ವ್ಯವಹಾರ ಹೆಚ್ಚಾಗುತ್ತದೆ. ಹಣಕಾಸು ವ್ಯವಹಾರ ಹೆಚ್ಚಾಗುತ್ತಿದ್ದಂತೆ ಆರ್ಥಿಕತೆ ಮೇಲಕ್ಕೆ ಏರಬಹುದು ಎಂಬ ಲೆಕ್ಕಾಚಾರ ಇದರಲ್ಲಿ ಅಡಗಿದೆ. ದೇಶದ ಶೇ.5ರಷ್ಟು ಜಿಡಿಪಿಯ ನೆರವನ್ನು ಇದರಿಂದ ಪಡೆಯಬಹುದು ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.
ಇದು ಸಾಧ್ಯವೇ?
ಒಂದು ದೇಶ ಸಿಕ್ಕಪಟ್ಟೆ ಕರೆನ್ಸಿ ನೋಟುಗಳನ್ನು ಮುದ್ರಿಸುವಂತಿಲ್ಲ. ಅದಕ್ಕೂ ಒಂದು ಮಾನದಂಡವಿದೆ. ದೇಶದ ಆರ್ಥಿಕ ಬೆಳವಣಿಗೆ ದರ(ಜಿಡಿಪಿ)ಯನ್ನು ಲೆಕ್ಕ ಹಾಕಲಾಗುತ್ತದೆ. ಇದರ ಜೊತೆ ಭದ್ರತೆಗಾಗಿ ಜೊತೆ ಚಿನ್ನವನ್ನು ಇಡಬೇಕಾಗುತ್ತದೆ. ಭಾರೀ ಪ್ರಮಾಣದಲ್ಲಿ ಹಣವನ್ನು ಮುದ್ರಿಸಿದರೆ ವಸ್ತುವಿನ ಬೆಲೆ ದಿಢೀರ್ ಹೆಚ್ಚಾಗುತ್ತದೆ
‘ಹೆಲಿಕಾಪ್ಟರ್ ಮನಿ’ ಎಫೆಕ್ಟ್ ಏನು?
ಬಹುತೇಕ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ದಿನನಿತ್ಯದ ಜೀವನ ದುಬಾರಿಯಾಗುತ್ತದೆ. ರೂಪಾಯಿ ಮೌಲ್ಯ ಕುಸಿಯುತ್ತದೆ ಹಣದುಬ್ಬರ ಉಂಟಾಗುತ್ತದೆ.
ಕೇಂದ್ರ ಸರ್ಕಾರ ಮಾಡಬಹುದೇ?
ಮೋದಿ ಸರ್ಕಾರ ಭ್ರಷ್ಟಾಚಾರ, ಕಪ್ಪು ಹಣ, ಉಗ್ರಗಾಮಿ ಚಟುವಟಿಕೆಗಳನ್ನು ಮಟ್ಟ ಹಾಕಲು 2016ರ ನವೆಂಬರ್ ನಲ್ಲಿ 500, 1 ಸಾವಿರ ರೂ. ನೋಟುಗಳನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ ಬಿಡುಗಡೆಯಾದ 2 ಸಾವಿರ ರೂ. ನೋಟುಗಳ ಮುದ್ರಣವನ್ನು ಸಹ ಕಡಿಮೆ ಮಾಡಿದೆ. ಡಿಜಿಟಲ್ ವ್ಯವಹಾರಕ್ಕೆ ಸರ್ಕಾರ ಜಾಸ್ತಿ ಒತ್ತು ನೀಡುತ್ತಿರುವಾಗ ‘ಹೆಲಿಕಾಪ್ಟರ್ ಮನಿ’ಯನ್ನು ಜಾರಿಗೊಳಿಸುವುದು ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ.
ಹಿಂದೆ ಜಾರಿ ಆಗಿದ್ಯಾ?
ಆಫ್ರಿಕಾ ಖಂಡದಲ್ಲಿರುವ ಜಿಂಬಾಬ್ವೆ ಮತ್ತು ದಕ್ಷಿಣ ಅಮೆರಿಕ ಖಂಡದಲ್ಲಿರುವ ವೆನೆಜುವೆಲಾ ದೇಶಗಳು ಭಾರೀ ಪ್ರಮಾಣದಲ್ಲಿ ಹಣವನ್ನು ಮುದ್ರಿಸಿತ್ತು. ಭಾರೀ ಪ್ರಮಾಣದಲ್ಲಿ ಮುದ್ರಿಸಿ ಪರಿಣಾಮ ಹಣಗಳು ಜನರ ಕೈಗೆ ಸೇರಿತ್ತು. ಪರಿಣಾಮ ವಸ್ತುಗಳ ಬೆಲೆ ಭಾರೀ ಏರಿಕೆ ಆಗಿತ್ತು. ಆಹಾರ ಪದಾರ್ಥಗಳನ್ನು ಖರೀದಿಸಲು ಮೂಟೆಗಟ್ಟಲೇ ಹಣವನ್ನು ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.