Breaking News

ಹಾನಗಲ್‌ ಕಾರಹುಣ್ಣಿಮೆ ವೇಳೆ ಗಲಾಟೆ; 24 ಹಿಂದೂಗಳು, 26 ಮುಸ್ಲಿಂ ಯುವಕರ ವಿರುದ್ಧ ಕೇಸ್‌ ದಾಖಲು

Spread the love

ಹಾವೇರಿ: ಹಾವೇರಿ ಸಮೀಪದ ನರೇಗಲ್‌ ಗ್ರಾಮದಲ್ಲಿ ಕಾರಹುಣ್ಣಿಮೆ ಆಚರಣೆ ವೇಳೆ ಪಟಾಕಿ ಹಚ್ಚುವ ವಿಚಾರಕ್ಕೆ ಗಲಾಟೆ ನಡೆದು 8ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದೀಗ ಎರಡು ಗುಂಪುಗಳ ನಡುವೆ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಈ ಗಲಾಟೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೊನ್ನೆ ಕಾರಹುಣ್ಣಿಮೆಯಂದು ಹೋರಿಗಳಿಗೆ ಬಣ್ಣ ಹಚ್ಚಿ ಓಡಿಸುತ್ತಾ ಪಟಾಕಿ ಹಚ್ಚಲಾಗುತ್ತಿತ್ತು. ಮಸೀದಿ ಮುಂದೆ ಪಟಾಕಿ ಹಚ್ಚಬೇಡಿ ಎಂದು ಹೇಳಿದ ವಿಚಾರಕ್ಕೆ ಹಿಂದೂ ಹುಡುಗರನ್ನು ಹೊಡೆದಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಯುವಕರ ಮೇಲೆ ಮುಸ್ಲಿಂ ಸಮುದಾಯದ ಕೆಲವರು ಅಡಿಕೆ ಸುಲಿಯುವ ಕುಡುಗೋಲಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಶಿವರಾಜ್, ಲೋಹಿತ್ ಮತ್ತು ಜಯಪ್ಪ ಗಂಭೀರವಾಗಿ ಗಾಯಗೊಂಡಿದ್ದು, ನಿಂಗಪ್ಪ, ನಾಗಪ್ಪ ಹಾಗೂ ಮಲ್ಲಪ್ಪ ಗಾಯಗೊಂಡಿದ್ದಾರೆ. ಈ ಸಂಬಂಧ ಹರೀಶ್ ಕುರುಬರ ಅವರು 26 ಮುಸ್ಲಿಂ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಜಯೇಂದ್ರ ಭೇಟಿ
ಇನ್ನು ಈ ಘಟನೆಯ ಪರಿಣಾಮ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನರೇಗಲ್‌ ಗ್ರಾಮಕ್ಕೆ ಭೇಟಿ ನೀಡಿ ಗಾಯಾಳುಗಳ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆ ನಡೆದು 24 ಗಂಟೆ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ನಾವು ಪಾಕಿಸ್ತಾನದಲ್ಲಿ ಇದ್ದೇವಾ, ಭಾರತದಲ್ಲಿ ಇದ್ದೇವಾ? ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇತ್ತ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನೀಡಿ ತೆರಳಿದ ಬೆನ್ನಲ್ಲೇ 24 ಹಿಂದೂಗಳ ವಿರುದ್ಧವೂ ದೂರು ದಾಖಲಾಗಿದೆ. ಗುಲಾಬ್‌ಜಾನ್ ಅನ್ವರ್‌ಸಾಬ್ ಯತ್ನಳ್ಳಿ ನೀಡಿದ ದೂರಿನ ಮೇರೆಗೆ ಪ್ರವೀಣ್ ಭಟ್ಟಿ, ವಿರಾಜ್ ಕುರುಬರ ಸೇರಿದಂತೆ ಒಟ್ಟು 24 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೋರಿ ಓಡಿಸಿಕೊಂಡು ಬಂದು ಪಟಾಕಿಯನ್ನು ಮಸೀದಿಯ ಕಾಂಪೌಂಡ್ ಒಳಗೆ ಹಾಕಿದ್ದಾರೆ. ಅದನ್ನು ಪ್ರಶ್ನಿಸಿದಾಗ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಸ್ಥಳೀಯ ಶಾಸಕ ಶ್ರೀನಿವಾಸ ಮಾನೆ ವಿರುದ್ಧವೂ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು. ಸ್ಥಳೀಯ ಶಾಸಕ ಎಲ್ಲಿದ್ದಾರೆ? ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ಅವರಿಗೆ ಮುಸ್ಲಿಮರು ಮಾತ್ರವಲ್ಲ, ಹಿಂದೂಗಳೂ ಮತ ಹಾಕಿದ್ದಾರೆ. ಅವರಿಂದಲೂ ಶಾಸಕರಾಗಿದ್ದಾರೆ ಎಂದು ಟೀಕಿಸಿದರು.

ಒಟ್ಟಿನಲ್ಲಿ, ಕಾರಹುಣ್ಣಿಮೆಯಂದು ಹೋರಿ ಓಡಿಸುವ ವೇಳೆ ಪಟಾಕಿ ವಿಚಾರಕ್ಕೆ ಆರಂಭವಾದ ಗಲಾಟೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ನರೇಗಲ್‌ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ.


Spread the love

About Laxminews 24x7

Check Also

ವಿವಾಹಿತೆಯನ್ನು ಓಡಿಸಿಕೊಂಡು ಹೋಗಿದ್ದಕ್ಕಾಗಿ ಮನೆ ಧ್ವಂಸ ಪ್ರಕರಣ: 3 ಅರೆಸ್ಟ್

Spread the love ಬೆಳಗಾವಿ: ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದ ವಿವಾಹಿತೆಯನ್ನು ಓಡಿಸಿಕೊಂಡು ಹೋದ ಎಂಬ ಕಾರಣಕ್ಕೆ ಯುವಕನ ಮನೆ ಧ್ವಂಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ