ಬೆಂಗಳೂರು,ಫೆ.20- ಸಾರಿಗೆ ನೌಕರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಇಂದಿಲ್ಲಿ ಹೇಳಿರುವ ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ವೇತನ ತಾರತಮ್ಯ ನಿವಾರಣೆ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಫ್ರೀಡಂಪಾರ್ಕ್‍ನಲ್ಲಿ ಇಂದು ಕೈಗೊಂಡ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ತೆರಳಿದ ಸಚಿವ ಲಕ್ಷ್ಮಣ್ ಸವದಿ ಅವರು ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ಕಳೆದ ಆರು ತಿಂಗಳ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಾರಿಗೆ ನಿಗಮಗಳ ನೌಕರರು ಸಿಎಂ ಬಳಿ ಬಂದು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದಾಗ, ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಿ ವರದಿ ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ತಮ್ಮ ಬೇಡಿಕೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಅವುಗಳನ್ನು ಈಡೇರಿಸುವ ಬಗ್ಗೆ ಕ್ರಮ ಕೈಗೊಂಡು ತಮ್ಮ ಅಳಿಲು ಸೇವೆ ಮಾಡಲು ನಾನು ಸಿದ್ದನಿದ್ದೇನೆ ಎಂದು ಹೇಳಿದರು. ಸಾರಿಗೆ ನೌಕರರು ಪ್ರತಿಭಟನೆಗಿಳಿದರೆ ರಾಜ್ಯಾದ್ಯಂತ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ನಮ್ಮ ನೌಕರರು ಪ್ರಯಾಣಿಕರಿಗೆ ತೊಂದರೆಯಾಗದಂತೆ ಇಂದು ಸತ್ಯಾಗ್ರಹ ನಡೆಸಿದ್ದಾರೆ. ಇದಕ್ಕೆ ನಾನು ಎಲ್ಲ ನೌಕರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನೀವು ನಡೆಸಿದ ಪ್ರತಿಭಟನೆಯು ಸರ್ಕಾರದ ಗಮನವನ್ನು ಸೆಳೆಯಲು ನಡೆಸಿದ ಹೋರಾಟ ಎಂದು ಭಾವಿಸುತ್ತೇನೆ. ಏನು ತಮ್ಮ ಬೇಡಿಕೆಗಳಿವೆ ಅವುಗಳೆಲ್ಲವನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಆದ್ಯತೆ ಮೇಲೆ ಅನುಷ್ಠಾನಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ಕೊಟ್ಟರು.
ಇದಕ್ಕೂ ಮುನ್ನ ಮಾತನಾಡಿದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ,ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅವರು ತಮ್ಮ ಹಕ್ಕುಗಳನ್ನು ಪಡೆಯಲು ಪ್ರತಿಭಟನೆಗೆ ಬಂದಿದ್ದಾರೆ. ಮೋಜು, ಮಸ್ತಿ ಮಾಡಲು, ಜಾತ್ರೆ ಮಾಡಲು ಬಂದಿಲ್ಲ. ಅವರ ವೇತನವನ್ನು ಕಡಿತ ಮಾಡಬೇಡಿ ಎಂದು ಮನವಿ ಮಾಡಿದರು.
ಪಾಟೀಲ್ ಪುಟ್ಟಪ್ಪ ಅವರು ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಒತ್ತಾಸೆ ಹೊಂದಿದ್ದರು. ಅದರಂತೆ ಸರ್ಕಾರ ಮನಸ್ಸು ಮಾಡಬೇಕು. ಕನಿಷ್ಠ ವೇತನ ತಾರತಮ್ಯವನ್ನಾದರೂ ಸರಿಪಡಿಸಬೇಕು ಎಂದು ಕೋರಿದರು. ಸಾರಿಗೆ ನಿಗಮಗಳ ನೌಕರರ ಅಧ್ಯಕ್ಷ ಶಿವಾರೆಡ್ಡಿ ಇನ್ನಿತರೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.