ಬೆಳಗಾವಿ: ದೂಧಗಂಗಾ ನದಿ ಸೇತುವೆ ಮೇಲೆ ಸುಮಾರು 8 ಅಡಿ ಉದ್ದದ ಬೃಹತ್ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಲಿಕವಾಡ ಮತ್ತು ದತ್ತವಾಡ ಗ್ರಾಮಗಳ ನಡುವೆ ನಡೆದಿದೆ.
ನದಿಯಿಂದ ಹೊರಬಂದ ಮೊಸಳೆ ಸೇತುವೆಯ ಮೇಲೆ ಕೆಲಕಾಲ ಸಂಚರಿಸಿದೆ. ಇದೇ ವೇಳೆ ಕಾರಿನಲ್ಲಿ ಆ ಮಾರ್ಗವಾಗಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಮೊಸಳೆಯನ್ನು ಗಮನಿಸಿ, ತಕ್ಷಣ ತಮ್ಮ ಮೊಬೈಲ್ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಸೇತುವೆ ಮೇಲೆ ಬೃಹತ್ ಮೊಸಳೆ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಹೆಚ್ಚಿಸಿದೆ.
ದೂಧಗಂಗಾ ನದಿ ತೀರದ ಗ್ರಾಮಸ್ಥರು ಹಾಗೂ ವಾಹನ ಸವಾರರು ಪ್ರತಿನಿತ್ಯ ಇದೇ ಸೇತುವೆಯನ್ನು ಬಳಸುತ್ತಿದ್ದಾರೆ. ಅಲ್ಲದೆ, ನದಿ ತೀರದಲ್ಲಿ ಜಾನುವಾರುಗಳೂ ಸಂಚರಿಸುವುದರಿಂದ ಮೊಸಳೆಯ ಪ್ರತ್ಯಕ್ಷತೆ ಸುರಕ್ಷತೆಯ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ.
ಯಾವುದೇ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಘಟನೆ ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Laxmi News 24×7