ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಹಿಡಿದ ಯುವತಿ ಪರ ವಕಾಲತ್ತು ವಹಿಸಲ್ಲ- ಮೈಸೂರು ವಕೀಲರು
ಮೈಸೂರು: ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಮಫಲಕ ಪ್ರದರ್ಶಿದ ನಳಿನಿ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸದೇ ಇರಲು ಮೈಸೂರು ವಕೀಲರ ಸಂಘ ನಿರ್ಣಯಿಸಿದೆ.
ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪೊಲೀಸರು ರಾಷ್ಟ್ರ ವಿರೋಧಿ ಪ್ರಕರಣ ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ ವಕಾಲತ್ತು ವಹಿಸದಂತೆ ವಕೀಲರಿಗೆ ಸೂಚನೆ ನೀಡಲಾಗಿದೆ.
ಮೈಸೂರು ಜಿಲ್ಲಾ ನ್ಯಾಯಾಲಯದ ಯುವ ವಕೀಲರು ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಬೇಡಿ. ಈ ಹಿಂದೆ ಸಹ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಪರ ಜಿಲ್ಲಾ ನ್ಯಾಯಾಲಯದ ವಕೀಲರು ವಕಾಲತ್ತು ವಹಿಸಿಲ್ಲ. ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಪ್ರಕರಣದಲ್ಲೂ ವಕಾಲತ್ತು ವಹಿಸಿಲ್ಲ. ಹೀಗಾಗಿ ಈ ಬಾರಿಯೂ ಇದೇ ದಿಟ್ಟ ನಿರ್ಣಯ ಕೈಗೊಳ್ಳಿ. ಈ ಮೂಲಕ ಸಂಘದ ಗೌರವ ಕಾಪಾಡಿ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ, ಆರೋಪಿ ನಳಿನಿ ಪರ ವಕಾಲತ್ತು ವಹಿಸದಿರುವ ಕುರಿತು ನಿರ್ಣಯ ಕೈಗೊಂಡಿದೆ.
