ಪ್ರಶಸ್ತಿಗಳ ಸುರಿಮಳೆ, ಅಣ್ಣಾವ್ರ ಕುಟುಂಬದ ದಾಖಲೆ..!

Spread the love

ವರನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನ ಏಪ್ರಿಲ್ 24ರಂದು. ರಾಜ್ ಮತ್ತು ಅವರ ಕುಟುಂಬದ ಸಾಧನೆ ಅನನ್ಯ. ಈ ಕುರಿತು ಒಂದು ಪಕ್ಷಿನೋಟ ಇಲ್ಲಿದೆ. ಬಾಲಿವುಡ್ ಅಥವಾ ಹಿಂದಿ ಚಿತ್ರರಂಗದಲ್ಲಿ ರಾಜ್‍ಕಪೂರ್ ಕುಟುಂಬ ದೊಡ್ಡ ಹೆಸರು ಮಾಡಿದೆ. ಈ ಕುಟುಂಬದ ಪೃಥ್ವಿರಾಜ್ ಕಪೂರ್, ರಾಜ್‍ಕಪೂರ್, ಶಮ್ಮಿ ಕಪೂರ್, ಶಶಿಕಪೂರ್ ಈ ನಾಲ್ವರು ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವುದು ಭಾರತೀಯ ಚಿತ್ರರಂಗದಲ್ಲೇ ಒಂದು ಅಪೂರ್ವ ದಾಖಲೆಯಾಗಿದೆ.

ಅದೇ ರೀತಿ ಕರ್ನಾಟಕ ಮತ್ತು ಕನ್ನಡ ಚಿತ್ರರಂಗದಲ್ಲಿ ವರ ನಟ ಡಾ.ರಾಜ್‍ಕುಮಾರ್ ಅವರ ಕುಟುಂಬ ಅಪೂರ್ವ ಕಲಾವಿದರ ಕುಟುಂಬವಾಗಿ ಖ್ಯಾತಿವೆತ್ತಿದೆ. ಈ ಕುಟುಂಬದ ಕಲಾವಿದರು ರಾಜ್ಯ , ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಬರೆದಿರುವುದು ಒಂದು ಸಂತೋಷಮಯ ವಿಸ್ಮಯವಾಗಿದೆ.

ಇತ್ತೀಚೆಗೆ ರಾಜ್ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಅವರು ಅಮ್ಮನ ಮನೆ ಚಿತ್ರದ ನಟನೆ ಪಡೆದಿದ್ದಾರೆ. ತನ್ಮೂಲಕ ರಾಜ್ ಕುಟುಂಬದ ಎಲ್ಲರಿಗೂ ರಾಜ್ಯ ಪ್ರಶಸ್ತಿ ಬಂದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ ಕುಟುಂಬದ ಪ್ರಶಸ್ತಿ ಸಾಧನೆಯನ್ನು ಅವಲೋಕಿಸುವುದಾದರೆ ಭಾರತೀಯ ಚಿತ್ರರಂಗದಲ್ಲೇ ಒಂದು ಅಪರೂಪದ ದಾಖಲೆ ಸೃಷ್ಟಿಯಾಗಿರುವುದು ವೇದ್ಯವಾಗುತ್ತದೆ.

# ಡಾ.ರಾಜ್‍ಕುಮಾರ್ : 
ವರ ನಟ ಡಾ.ರಾಜ್‍ಕುಮಾರ್ ಅವರು ಅನೇಕ ರಾಜ್ಯ , ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1985ರಲ್ಲಿ ಅಮೆರಿಕದ ಕೆಂಟುಕಿ ಗವರ್ನರ್‍ರಿಂದ ಕೆಂಟುಕಿ ಕರ್ನಲ್ ಪ್ರಶಸ್ತಿ ಪುರಸ್ಕøತರಾಗಿದ್ದಾರೆ. ಈ ಪ್ರಶಸ್ತಿ ಪಡೆದ ಏಕೈಕ ಭಾರತೀಯ ನಟ ಎಂಬ ಹಿರಿಮೆ ರಾಜ್ ಅವರದಾಗಿದೆ.

# ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು : 
ಡಾ.ರಾಜ್ ಅವರು 1983ರಲ್ಲಿ ಪದ್ಮಭೂಷಣ, 1992ರಲ್ಲಿ ಜೀವನಚೈತ್ರ  ಚಿತ್ರದ ನಾದಮಯ ಈ ಲೋಕವೆಲ್ಲಾ ಗೀತೆಯ ಗಾಯನಕ್ಕಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರೀಯ ಪ್ರಶಸ್ತಿ, 1995ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 2002ರಲ್ಲಿ ಎನ್‍ಟಿಆರ್ ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. 2009ರಲ್ಲಿ ಭಾರತದ ಕೇಂದ್ರ ಸರ್ಕಾರ ರಾಜ್ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. 2017ರ ಏ.24ರಂದು ರಾಜ್ ಅವರ 88ನೆ ಜನ್ಮ ದಿನೋತ್ಸವದ ಸಂದರ್ಭದಲ್ಲಿ ಗೂಗಲ್ ಇಂಡಿಯಾ ರಾಜ್ ಗೌರವಾರ್ಥ ಡೂಡಲ್ ಗೌರವ ಸಲ್ಲಿಸಿತು.

# ರಾಜ್ಯ ಮಟ್ಟದ ಗೌರವಗಳು : 
ಡಾ.ರಾಜ್ ಅವರಿಗೆ 1973ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1976ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, 1967ರಲ್ಲಿ ಕರ್ನಾಟಕ ಸರ್ಕಾರದಿಂದ ನಟ ಸಾರ್ವಭೌಮ ಬಿರುದು ಮತ್ತು 1992ರಲ್ಲಿ ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪುರಸ್ಕಾರ, 1999ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ಲಭಿಸಿವೆ. ಬೆಂಗಳೂರಿನ ಯಶವಂತಪುರದ ಸಾಬೂನು ಕಾರ್ಖಾನೆಯಿಂದ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದವರೆಗಿನ 6 ಕಿಲೋ ಮೀಟರ್ (3.7 ಮೈಲು) ಗಳಷ್ಟು ಉದ್ದದ ರಸ್ತೆಗೆ ಡಾ.ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

# ಫಿಲಂಫೇರ್ ಪ್ರಶಸ್ತಿಗಳು : 
ಡಾ.ರಾಜಕುಮಾರ್ ಅವರು ಎಂಟು ಬಾರಿ ಫಿಲಂಫೇರ್ (ದಕ್ಷಿಣ) ಪ್ರಶಸ್ತಿಗಳನ್ನು ಪಡೆದಿದ್ದಾರೆ. 1973ರಲ್ಲಿ ಗಂಧದ ಗುಡಿ, 1975ರಲ್ಲಿ ಮಯೂರ, 1978ರಲ್ಲಿ ಶಂಕರ್ ಗುರು, 1981ರಲ್ಲಿ ಕೆರಳಿದ ಸಿಂಹ, 1984ರಲ್ಲಿ ಶ್ರಾವಣ ಬಂತು, 1985ರಲ್ಲಿ ಅದೇ ಕಣ್ಣು, 1986ರಲ್ಲಿ ಭಾಗ್ಯದ ಲಕ್ಷ್ಮೀ ಬಾರಮ್ಮ, 1993ರಲ್ಲಿ ಆಕಸ್ಮಿಕ ಚಿತ್ರಗಳ ನಟನೆಗಾಗಿ ಶ್ರೇಷ್ಠ ನಟ ಫಿಲಂಫೇರ್ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

# ಕರ್ನಾಟಕ ರಾಜ್ಯ ಪ್ರಶಸ್ತಿಗಳು : 
ಡಾ.ರಾಜಕುಮಾರ್ ಅವರು 13 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರಲ್ಲಿ ಅತ್ಯುತ್ತಮ ನಟನೆಗಾಗಿ 9, ಶ್ರೇಷ್ಠ ಗಾಯನಕ್ಕಾಗಿ 2 ಮತ್ತು ಜೀವ ಮಾನ ಸಾಧನೆಗಾಗಿ ಒಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ.

# ಅತ್ಯುತ್ತಮ ನಟ ಪ್ರಶಸ್ತಿಗಳು : 
ಡಾ.ರಾಜ್ ಬಂಗಾರದ ಹೂವು (1967- 68) , ಕುಲ ಗೌರವ (1970-71), ಭಕ್ತ ಕುಂಬಾರ (1974-75), ಬಬ್ರುವಾಹನ (1976-77), ಹೊಸ ಬೆಳಕು (1981-82) , ಹಾಲು-ಜೇನು (1982-83), ದೇವತಾ ಮನುಷ್ಯ (1988-89), ಜೀವನ ಚೈತ್ರ (1992-93) , ಒಡ ಹುಟ್ಟಿದವರು (1993-94) ಚಿತ್ರಗಳ ಶ್ರೇಷ್ಠ ನಟನೆಗೆ ರಾಜ್ಯ ಪ್ರಶಸ್ತಿ ಪುರಸ್ಕøತರಾಗಿದ್ದಾರೆ.

# ಅತ್ಯುತ್ತಮ ಗಾಯನಕ್ಕಾಗಿ : 
ಗಾನ ಗಂಧರ್ವ ಬಿರುದಾಂಕಿತ ಡಾ.ರಾಜ್ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಾಗಿ (1993-94) ಮತ್ತು ತಾಯಿ ಇಲ್ಲದ ತವರು ಚಿತ್ರದ ಅರಿಶಿನ ಕುಂಕುಮ ಗೀತೆಗಾಗಿ (1994-95) ಶ್ರೇಷ್ಠ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

# ಇತರ ಪ್ರಶಸ್ತಿಗಳು ಮತ್ತು ಗೌರವಗಳು : 
ಕರ್ನಾಟಕದಲ್ಲಿ ರಾಜಕುಮಾರ್ ಅವರ 1100ಕ್ಕೂ ಅಧಿಕ ಪುತ್ಥಳಿಗಳು ಸ್ಥಾಪಿತವಾಗಿವೆ. ಬೆಂಗಳೂರಿನ ಕುರುಬರ ಹಳ್ಳಿಯಲ್ಲಿ ಹಂಪಿ ಕಲ್ಲಿನ ರಥದ ಮೇಲೆ ಮಯೂರನ ಭಂಗಿಯಲ್ಲಿರುವ ಕಂಚಿನ ಪ್ರತಿಮೆ 1 .25 ಕೋಟಿಯಷ್ಟು ಮೌಲ್ಯದ ಪ್ರತಿಮೆ ರಾಜ್ಯದ ಗಮನ ಸೆಳೆಯುತ್ತದೆ. ರಾಷ್ಟ್ರಕವಿ ಕುವೆಂಪು ರಾಜ್ ಅವರನ್ನು ವಿಶ್ವ ಮಾನವ ಎಂದು ಕರೆದಿದ್ದರು. 2003ರಲ್ಲಿ ಈ ಟಿವಿ ವರ್ಷದ ಕನ್ನಡಿಗ ಪ್ರಶಸ್ತಿ ಕೂಡ ರಾಜ್‍ಗೆ ಸಂದಿದೆ.

2005ರ ಜುಲೈನಲ್ಲಿ ರಾಜ್ ಅವರು ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಎನ್.ಧಮಸಿಂಗ್ ಅವರ ನೇತೃತ್ವದ ಅಂದಿನ ಕರ್ನಾಟಕ ಸರ್ಕಾರವು ಸಾರ್ಥಕ ಸುವರ್ಣ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿ ರಾಜ್‍ರನ್ನು ಗೌರವಿಸಿತು. ಸಮಗ್ರ ಕನ್ನಡ ಚಿತ್ರರಂಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್‍ರನ್ನು ಅಭಿನಂದಿಸಿತು. ಎ.ಎನ್.ಪ್ರಹ್ಲಾದರಾವ್ ಅವರು ಬರೆದ ರಾಜ್‍ಕುಮಾರ್ ಅವರ ಜೀವನ ಚರಿತ್ರೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

#ಪುಸ್ತಕಗಳು : 
ವರನಟ ಡಾ.ರಾಜಕುಮಾರ್ ಅವರ ಕುರಿತು 75ಕ್ಕೂ ಅಧಿಕ ಪುಸ್ತಕಗಳು ರಚನೆಗೊಂಡಿದ್ದು, ಭಾರತೀಯ ಚಿತ್ರರಂಗದ ಯಾವ ನಟನಿಗೂ ಇಂಥ ಗೌರವ ಲಭಿಸಿಲ್ಲ. ಇವುಗಳ ಪೈಕಿ ರಾಜ್ ಪುತ್ರ ಪುನೀತ್ ರಾಜ್‍ಕುಮಾರ್ ಅವರು ಬರೆದ ಮತ್ತು ದೊಡ್ಡ ಹುಲ್ಲೂರು ರುಕ್ಕೋಜಿ ಅವರು ಬರೆದ ರಾಜ್ ಕುರಿತ ಪುಸ್ತಕಗಳು ಅಪಾರ ಹೆಸರು ಗಳಿಸಿವೆ.

# ಡಾ.ಶಿವರಾಜ್‍ಕುಮಾರ್ : 
ಡಾ.ರಾಜ್ ಅವರ ಪುತ್ರರನ್ನು ಸಿಂಹದ ಮರಿಗಳು ಎಂದು ಕರೆಯಲಡ್ಡಿಯಿಲ್ಲ. ಹಿರಿಯ ಪುತ್ರ ಡಾ.ಶಿವರಾಜ್‍ಕುಮಾರ್ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಗೌರವ ಡಾಕ್ಟರೇಟ್ ಪುರಸ್ಕಾರ ಸೇರಿದಂತೆ ಹಲವಾರು ಗೌರವಗಳನ್ನು ಶಿವಣ್ಣ ತಮ್ಮದಾಗಿಸಿಕೊಂಡಿದ್ದಾರೆ. 1995-96ರಲ್ಲಿ ಓಂ, 1999-2000ದಲ್ಲಿ ಹೃದಯ ಹೃದಯಾ, 2003-04ರಲ್ಲಿ ಚಿಗುರಿದ ಕನಸು, 2005-06ರಲ್ಲಿ ಜೋಗಿ ಚಿತ್ರದ ನಟನೆಗಾಗಿ ಶ್ರೇಷ್ಠ ನಟ ರಾಜ್ಯ ಪ್ರಶಸ್ತಿ ಪುರಸ್ಕøತರಾಗಿದ್ದಾರೆ.

1995ರಲ್ಲಿ ಓಂ, 1996ರಲ್ಲಿ ನಮ್ಮೂರ ಮಂದಾರ ಹೂವೇ, 1999ರಲ್ಲಿ ಎಕೆ-47, 2010ರಲ್ಲಿ ತಮಸ್ಸು ಚಿತ್ರಗಳಿಗೆ  ಶ್ರೇಷ್ಠ ನಟ ಫಿಲಂಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 2012ರಲ್ಲಿ ಸಾಮಾಜಿಕ ಹೊಣೆಗಾರಿಕೆಗಾಗಿ 2014ರಲ್ಲಿ ಶಿವ, 2013ರಲ್ಲಿ ಭಜರಂಗಿ, 2017ರಲ್ಲಿ ಶಿವಲಿಂಗ ಚಿತ್ರಗಳಿಗಾಗಿ ಎಸ್‍ಐಐಎಂಎ ಪ್ರಶಸ್ತಿಗಳು ಶಿವಣ್ಣ ಅವರನ್ನು ಅರಸಿ ಬಂದಿವೆ.

ಲಂಡನ್ನಿನ ಬ್ರಿಟಿಷ್ ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮಸ್ ಆ್ಯಂಡ್ ವಿಷನೇರ್ ಎಂಟರ್‍ಟೈನ್‍ಮೆಂಟ್ ವತಿಯಿಂದ 2016ರಲ್ಲಿ ಶಿವಣ್ಣ ಅವರು ಕೊಹಿನೂರ್ ಆಫ್ ಸೌತ್ ಇಂಡಿಯಾ ಪ್ರಶಸ್ತಿ ಭೂಷಿತರಾಗಿದ್ದಾರೆ.

1986ರಲ್ಲಿ ಆನಂದ್, 1998ರಲ್ಲಿ ಭೂಮಿ ತಾಯಿಯ ಚೊಚ್ಚಲ ಮಗ ಚಿತ್ರಗಳಿಗಾಗಿ ಉಜ್ವಲ ಎಕ್ಸ್‍ಪ್ರೆಸ್ ಪ್ರಶಸ್ತಿ, 1992ರಲ್ಲಿ ಮಿಡಿದ ಶೃತಿ, 1996ರಲ್ಲಿ ಜನುಮದ ಜೋಡಿ, 1999ರಲ್ಲಿ ಎಕೆ-47 ಚಿತ್ರಗಳಿಗೆ ಚಿತ್ರ ರಸಿಕರ ಸಂಘ ಪ್ರಶಸ್ತಿ, 1995ರಲ್ಲಿ ಓಂ, 1996ರಲ್ಲಿ ಜನುಮದ ಜೋಡಿ, 1999ರಲ್ಲಿ ಎ.ಕೆ.-47 ಚಿತ್ರಗಳಿಗೆ ಹೀರೋ ಹೋಂಡಾ ಎಕ್ಸ್‍ಪ್ರೆಸ್ ಪ್ರಶಸ್ತಿ, 1996ರಲ್ಲಿ ಜನುಮದ ಜೋಡಿ ಚಿತ್ರಕ್ಕಾಗಿ ಆರ್ಯಭಟ ಪ್ರಶಸ್ತಿ, 1996ರಲ್ಲಿ ನಮ್ಮೂರ ಮಂದಾರ ಹೂವೇ ಚಿತ್ರಕ್ಕೆ ಸ್ಕ್ರೀನ್ ಪ್ರಶಸ್ತಿ, 2002ರಲ್ಲಿ ತವರಿಗೆ ಬಾ ತಂಗಿ, 2004ರಲ್ಲಿ ಚಿಗುರಿದ ಕನಸು ಚಿತ್ರಗಳಿಗೆ ಎಸ್‍ಐಸಿಎ ಸ್ಪೆಷಲ್ ಜ್ಯೂರಿ ಪ್ರಶಸ್ತಿ, 2004ರಲ್ಲಿ ಚಿಗುರಿದ ಕನಸು ಚಿತ್ರಕ್ಕಾಗಿ ಹಲೋ ಗಾಂಧಿನಗರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

# ಪುನೀತ್ ರಾಜ್‍ಕುಮಾರ್ : 
ಆರು ತಿಂಗಳ ಮಗಗುವಾಗಿರುವಾಗಲೇ ಚಿತ್ರರಂಗಕ್ಕೆ ಬಂದ ರಾಜ್‍ರ ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ಅಪಾರ ಜನಪ್ರಿಯತೆ ಗಳಿಸಿ ಪವರ್ ಸ್ಟಾರ್ ಎಂದೇ ಜನಜನಿತರಾಗಿದ್ದಾರೆ. ಬೆಟ್ಟದ ಹೂವು ಚಿತ್ರದ ಅಭಿನಯಕ್ಕೆ 1985ರಲ್ಲಿ ಶ್ರೇಷ್ಠ ಬಾಲ ನಟ ರಾಷ್ಟ್ರೀಯ ಪುರಸ್ಕಾರ ಪಡೆದ ಪುನೀತ್ 1982-83ರಲ್ಲಿ ಚಲಿಸುವ ಮೋಡಗಳು (ಶ್ರೇಷ್ಠ ಬಾಲನಟ) , 1983-84ರಲ್ಲಿ ಎರಡು ನಕ್ಷತ್ರಗಳು (ಶ್ರೇಷ್ಠ ಬಾಲನಟ), 2007-08ರಲ್ಲಿ ನಾಯಕ ನಟನಾಗಿ ಮಿಲನ, 2010-11ರಲ್ಲಿ ಜಾಕಿ ಚಿತ್ರಗಳಿಗೆ ಶ್ರೇಷ್ಠ ನಟ ರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

2011ರಲ್ಲಿ ಹುಡುಗರು , 2013ರಲ್ಲಿ ಯಾರೇ ಕೂಗಾಡಲಿ, 2016ರಲ್ಲಿ ರಣ ವಿಕ್ರಮ, 2018ರಲ್ಲಿ ರಾಜಕುಮಾರ ಚಿತ್ರಗಳಿಗಾಗಿ ಅತ್ಯುತ್ತಮ ನಟ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ (ಎಸ್‍ಐಐಎಂ) ಪ್ರಶಸ್ತಿಗಳಿಗೆ ಕೊರಳೊಡ್ಡಿದ್ದಾರೆ.

1985ರಲ್ಲಿ ಬೆಟ್ಟದ ಹೂವು (ಬಾಲ ನಟ) 2007ರಲ್ಲಿ ಅರಸು, 2011ರಲ್ಲಿ ಹುಡುಗರು, 2015ರಲ್ಲಿ ರಣ ವಿಕ್ರಮ, 2017ರಲ್ಲಿ ರಾಜಕುಮಾರ ಚಿತ್ರಗಳಿಗೆ ಶ್ರೇಷ್ಠ ನಟ ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2008ರಲ್ಲಿ ಮಿಲನ, 2010ರಲ್ಲಿ ಜಾಕಿ, 2013ರಲ್ಲಿ ಅಣ್ಣಾ ಬಾಂಡ್ ಚಿತ್ರಗಳಿಗೆ ಸುವರ್ಣ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು 2008ರಲ್ಲಿ ಸ್ಥಾಪಿಸಲಾಗಿದೆ.

2008ರಲ್ಲಿ ವಂಶಿ, 2009ರಲ್ಲಿ ರಾಜ್ ದಿ ಶೋ ಮ್ಯಾನ್ ಚಿತ್ರಗಳು ಶ್ರೇಷ್ಠ ನಟನೆಗಾಗಿ ಸೌತ್ ಸ್ಕೋಪ್ ಪ್ರಶಸ್ತಿ ಗಳಿಸಿದ್ದಾರೆ. ಐಐಎಫ್‍ಎ ಉತ್ಸವಂನಲ್ಲಿ 2017ರಲ್ಲಿ ನನ್ನ ನಿನ್ನ ಪ್ರೇಮ ಕಥೆ ಚಿತ್ರದ ಮದುವೆ ಮುಂಜಿ ಗೀತೆ, ರನ್ ಆ್ಯಂಟನಿ ಚಿತ್ರದ ಝನಕ್ ಝನಕ್ ಗೀತೆಗಾಗಿ ಅತ್ಯುತ್ತಮ ಗಾಯಕ ಪ್ರಶಸ್ತಿಗೆ ನಾಮಕರಣಗೊಂಡಿದ್ದರು.

ಇತರ ಪ್ರಶಸ್ತಿಗಳಲ್ಲಿ ಉದಯ ಅತ್ಯುತ್ತಮ ನಟ ಪ್ರಶಸ್ತಿ (2010- ಜಾಕಿ), ಝೀ ಅತ್ಯುತ್ತಮ ಗಾಯಕ ಪ್ರಶಸ್ತಿ (2015-ಅಧ್ಯಕ್ಷ) ಮಿರ್ಚಿ ದಕ್ಷಿಣ ಸಂಗೀತ ಪ್ರಶಸ್ತಿ (2015), ಝೀ ಕನ್ನಡ ಹೆಮ್ಮೆಯ ಕನ್ನಡಿಗ ಪ್ರಶಸ್ತಿ (ಅತ್ಯುತ್ತಮ ನಟ -ರಾಜಕುಮಾರ್ 2018) ಲವಲವಿಕೆ ವಾಚಕರ ಆಯ್ಕೆ ಪ್ರಶಸ್ತಿ (ಶ್ರೇಷ್ಠ ನಟ- ರಾಜಕುಮಾರ 2018) ಸೇರಿವೆ.

# ರಾಘವೇಂದ್ರ ರಾಜಕುಮಾರ್ : 
ಡಾ.ರಾಜ್ ಅವರ ಎರಡನೆ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಕೂಡ ನಟನಾಗಿ, ಗಾಯಕನಾಗಿ ಅನೇಕ ಸೂಪರ್‍ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಾಘಣ್ಣ ಮತ್ತು ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣ ಇವತ್ತಿಗೂ ಮಹತ್ತರ ದಾಖಲೆ ನಿರ್ಮಿಸಿರುವ ಚಿತ್ರ. 2019ರ ಸಾಲಿಗೆ ಅಮ್ಮನ ಮನೆ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ರಾಜ್ಯ ಪ್ರಶಸ್ತಿ ಗಳಿಸುವ ಮೂಲಕ ರಾಜ್ ಕುಟುಂಬದ ಪ್ರಶಸ್ತಿ ವಿಜೇತರ ಸಂಖ್ಯೆಯನ್ನು ಪರಿಪೂರ್ಣಗೊಳಿಸಿದ ಹೆಮ್ಮೆ ಇವರದಾಗಿದೆ.

ಇನ್ನು ರಾಜ್ ಪುತ್ರಿ ಬೇಬಿ ಪೂರ್ಣಿಮಾ (ಈಗ ಪೂರ್ಣಿಮಾ ರಾಮಕುಮಾರ್) ಪ್ರೇಮದ ಕಾಣಿಕೆ ಚಿತ್ರಕ್ಕಾಗಿ ರಾಜ್ ಮೊಮ್ಮಗಳು (ಶಿವರಾಜ್‍ಕುಮಾರ್ ಪುತ್ರಿ) ಬೇಬಿ ನಿವೇದಿತಾ ಶಿವರಾಜ್‍ಕುಮಾರ್ ಅಂಡಮಾನ್ ಚಿತ್ರಕ್ಕಾಗಿ ಶ್ರೇಷ್ಠ ಬಾಲ ನಟಿ ಪ್ರಶಸ್ತಿ ಗಳಿಸಿದ್ದಾರೆ.

ಡಾ.ರಾಜ್‍ಕುಮಾರ್ ಅವರ ಧರ್ಮ ಪತ್ನಿ ಶ್ರೀಮತಿ ಪಾರ್ವತಮ್ಮ ರಾಜ್‍ಕುಮಾರ್ ಸಹ ಪತಿ, ಪುತ್ರರು, ಮೊಮ್ಮಕ್ಕಳಿಗಿಂತ ಪ್ರಶಸ್ತಿ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಕನ್ನಡ ಚಲನಚಿತ್ರರಂಗಕ್ಕೆ ನೀಡಿರುವ ಕೊಡುಗೆಗಾಗಿ ಸುವರ್ಣ ಪ್ರಶಸ್ತಿ ಪಡೆದಿದ್ದಾರೆ.

1982-83ರಲ್ಲಿ ಹಾಲು-ಜೇನು, 1992-93ರಲ್ಲಿ ಜೀವನ ಚೈತ್ರ ಚಿತ್ರಗಳಿಗೆ ಅತ್ಯುತ್ತಮ ಚಿತ್ರ ನಿರ್ಮಾಪಕಿ ಪ್ರಶಸ್ತಿ, 1999-2000ದಲ್ಲಿ ಅತ್ಯುತ್ತಮ ಸಾಮಾಜಿಕ ಕಾಳಜಿಯ ವಿಶೇಷ ಚಿತ್ರ ಶಬ್ದವೇಧಿ, ಸಿನಿಮಾ ನಿರ್ಮಾಪಕಿಯಾಗಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. 2007-08ರಲ್ಲಿ ಜೀವ ಮಾನ ಸಾಧನೆ ಪ್ರಶಸ್ತಿ ಪುರಸ್ಕøತರಾಗಿದ್ದಾರೆ.

1985ರಲ್ಲಿ ಬೆಟ್ಟದ ಹೂವು, 1986ರಲ್ಲಿ ಭಾಗ್ಯದ ಲಕ್ಷ್ಮೀ ಬಾರಮ್ಮ, 1996ರಲ್ಲಿ ಜನುಮದ ಜೋಡಿ, 2010ರಲ್ಲಿ ಜಾಕಿ ಚಿತ್ರಗಳಿಗೆ ಅತ್ಯುತ್ತಮ ಚಿತ್ರಗಳ ನಿರ್ಮಾಪಕಿಯಾಗಿ ಫಿಲಂಫೇರ್ (ದಕ್ಷಿಣ) ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಡಾ.ರಾಜ್ ಕುಟುಂಬದಲ್ಲಿ ರಾಜ್, ಅವರ ಪತ್ನಿ ಪಾರ್ವತಮ್ಮ ರಾಜ್‍ಕುಮಾರ್ , ಪುತ್ರ ಶಿವರಾಜ್‍ಕುಮಾರ್ ಅವರು ಗೌರವ ಡಾಕ್ಟರೇಟ್ ಪುರಸ್ಕøತರಾಗಿದ್ದಾರೆ.  ಒಂದೇ ಕುಟುಂಬದ ಮೂವರು ಸದಸ್ಯರು ಈ ರೀತಿಯ ಗೌರವಕ್ಕೆ ಪಾತ್ರರಾಗಿರುವುದು ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಸಾಧನೆಯಾಗಿದೆ.

ಮಾಹಿತಿ ಕೃಪೆ: ಅಂತರ್ಜಾಲ
ನಿರೂಪಣೆ: ಸನ್ಮಿತ್ರ


Spread the love

About Laxminews 24x7

Check Also

ಬೆಲೆ ಏರಿಕೆ ನಡುವೆ BSNL ಗ್ರಾಹಕರಿಗೆ ಗುಡ್ ನ್ಯೂಸ್

Spread the love ನವದೆಹಲಿ: ಭಾರತದಲ್ಲಿನ ಟೆಲಿಕಾಂ ಸೇವಾ ಪೂರೈಕೆದಾರರು ಇತ್ತೀಚೆಗೆ ತಮ್ಮ ರೀಚಾರ್ಜ್ ಬೆಲೆಗಳನ್ನು ನವೀಕರಿಸಿದ್ದಾರೆ. ರಿಲಯನ್ಸ್ ಜಿಯೋ, ಏರ್‌ಟೆಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ