ನವದೆಹಲಿ: ಪತಂಜಲಿ ಸಂಸ್ಥೆ 5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಅತ್ಯುತ್ತಮ ಮಾರ್ಗ. ಕಳೆದ 40 ವರ್ಷಗಳಿಂದ ನಾನು ಬೆಳಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದೇನೆ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ.
ಮಾಧ್ಯವೊಂದರ ಜೊತೆ ಬಾಬಾ ರಾಮ್‍ದೇವ್ ಮಾತನಾಡಿ ಸ್ವಾವಲಂಬಿ (ಆತ್ಮನಿರ್ಭರ್) ಭಾರತಕ್ಕಾಗಿ ಅಳವಡಿಸಿಕೊಳ್ಳಬಹುದಾದ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಆತ್ಮನಿರ್ಭರ್ ಭಾರತಕ್ಕಾಗಿ ನಾನು ಮೊದಲು ಮೂರು ಕೆಲಸಗಳನ್ನು ಮಾಡುತ್ತೇನೆ. ದೇಶವು ಖಾದ್ಯ ತೈಲದ ಮೇಲೆ ಸ್ವಾವಲಂಬಿಯಾಗಲು ಸೋಯಾ, ಸೂರ್ಯಕಾಂತಿ, ಸಾಸಿವೆ ಆಗಿರಲಿ… ಉತ್ಪಾದನೆ ಹೆಚ್ಚಿಸಲು ಚಳುವಳಿಯನ್ನು ನಡೆಸುತ್ತೇವೆ. ಮುಂದಿನ 5 ರಿಂದ 10 ವರ್ಷದಲ್ಲಿ ನಾವು ಇತರರನ್ನು ಅವಲಂಬಿಸಬೇಕಾಗಿಲ್ಲ. ಆ ಮೂಲಕ 5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತೇನೆ. ಪತಂಜಲಿಯ ಮತ್ತು ರುಚಿ ಸೋಯಾದ ವಿವಿಧ ಯೋಜನೆಗಳ ಮೂಲಕ ಮುಂದಿನ 5 ವರ್ಷದಲ್ಲಿ ಲಕ್ಷ ಕೋಟಿ ರೂ. ಆದಾಯ ಕೊಡುಗೆಯಾಗಿ ನೀಡಬಹುದು ಎಂದು ಹೇಳಿದ್ದಾರೆ.
ಇದೇ ವೇಳೆ ರಾಜಕಾರಣಿಗಳಿಂದ ನೀವು ಏನು ನಿರೀಕ್ಷೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ಕೃಷಿ, ಕೈಗಾರಿಕೆ, ಉತ್ಪಾದನೆ, ಆಟೋ ಮೊಬೈಲ್‍ಗಳಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಭಾರತ ಕೇಂದ್ರಿತ ನೀತಿಗಳನ್ನು ರೂಪಿಸಬೇಕಿದೆ. ಅನೇಕ ಸಂಸ್ಥೆಗಳು, ಜನರು ಬಂಡವಾಳವನ್ನು ಹೊಂದಿದ್ದಾರೆ. ಜನರು ಖರ್ಚು ಮಾಡಲು ಹಿಂಜರಿಯದಂತಹ ನೀತಿಗಳನ್ನು ರೂಪಿಸಬೇಕಿದೆ. ಇದರಿಂದ ಸ್ವಲ್ಪ ಲಾಭಗಳಿಸುವ ಭಾವನೆ ಅವರಿಗೆ ಮೂಡುವಂತಿರಬೇಕು ಎಂದು ಹೇಳಿದ್ದಾರೆ.
ಕೋವಿಡ್-19 ವಿರುದ್ಧ ಹೋರಾಟ ಮಾಡಲು ಮೆಡಿಸಿನ್ ತಯಾರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಕಾರ್ಯನಿರ್ವಹಿಸುತ್ತಿದ್ದು, ಖಂಡಿತ ಯಶಸ್ಸು ಸಾಧಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕೋವಿಡ್ ಕಾಣಿಸಿಕೊಂಡ ಸಮಯದಿಂದ ಈ ಕುರಿತ ಸಂಶೋಧನೆಯನ್ನು ನಡೆಸುತ್ತಿದ್ದೇವೆ. ಪ್ರಾಣಾಯಾಮ ಪರಿಣಾಮಕಾರಿಯಾಗಿದೆ. ವಿವಿಧ ಪ್ರದೇಶಗಳಲ್ಲಿ ಈ ಕುರಿತ ಸಂಶೋಧನೆಗಳನ್ನು ನಡೆಸಿದ್ದು, ಉತ್ತಮ ಫಲಿತಾಂಶ ಲಭಿಸುತ್ತಿದೆ. ಕೋವಿಡ್‍ಗೆ ಲಸಿಕೆ ಲಭಿಸುವ ಮೊದಲು ನಾವು ಆಯುರ್ವೇದವನ್ನು ಕೋವಿಡ್ ವಿರುದ್ಧ ಹೋರಾಡಲು ಆಯುಧವಾಗಿ ನೀಡುತ್ತೇವೆ ಎಂದಿದ್ದಾರೆ.