ಚಿಕ್ಕಮಗಳೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಂದು ನಂಬಿಸಿ ಸಾರ್ವಜನಿಕರಿಗೆ ಹಣ ಹಾಗೂ ಚಿನ್ನಾಭರಣ ವಂಚಿಸುತ್ತಿದ್ದ ಆರೋಪದ ಮೇಲೆ ನಕಲಿ ಲೇಡಿ ಪಿಎಸ್ಐಯೊಬ್ಬಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಮೂಲದ ನಿವೇದಿತಾ ಗೌಡ ಬಂಧಿತ ಮಹಿಳೆ. ಚಿಕ್ಕಮಗಳೂರು ನಗರದಲ್ಲಿ ಕೆಫೆ ನಡೆಸುತ್ತಿದ್ದ ನಿವೇದಿತಾ, ಕೆಫೆಗೆ ಬರುತ್ತಿದ್ದ ಯುವಕರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಪರಿಚಯ ಬೆಳೆಸುತ್ತಿದ್ದಳು. ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್ಐ ಎಂದು ಪರಿಚಯಿಸಿಕೊಂಡು, ಸದ್ಯ ರಜೆಯ ಮೇಲೆ ಚಿಕ್ಕಮಗಳೂರಿಗೆ ಬಂದಿರುವುದಾಗಿ ಹೇಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯೆಂದು ಜನರು ನಂಬುವಂತೆ ಮಾಡಲು ಪೊಲೀಸ್ ಅಧಿಕಾರಿಗಳ ರೀತಿಯ ಹೇರ್ಕಟ್ ಹಾಗೂ ಉಡುಪು ಧರಿಸುತ್ತಿದ್ದಳು ಎನ್ನಲಾಗಿದೆ. ಪರಿಚಯವಾದ ಬಳಿಕ ಓಡಾಟದ ನೆಪದಲ್ಲಿ ಐಷಾರಾಮಿ ಕಾರುಗಳನ್ನು ಪಡೆದುಕೊಂಡು, ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.
ಪೊಲೀಸರ ತನಿಖೆಯ ವೇಳೆ ನಿವೇದಿತಾ 25ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ವಂಚಿಸಿರುವುದು ಬೆಳಕಿಗೆ ಬಂದಿದೆ. ಮೋಸ ಹೋದ 20ಕ್ಕೂ ಹೆಚ್ಚು ಮಂದಿ ನೀಡಿದ ದೂರಿನ ಆಧಾರದ ಮೇಲೆ ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಈ ದೂರಿನ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ನಿವೇದಿತಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆಕೆಯ ಮೊಬೈಲ್ನಲ್ಲಿ ಬೇರೆ ಬೇರೆ ಹೆಸರುಗಳಿರುವ ನಕಲಿ ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ.
ನಿವೇದಿತಾ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಇದೇ ರೀತಿಯಲ್ಲಿ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವಂಚಿಸಿದ ಹಣ ಹಾಗೂ ಚಿನ್ನಾಭರಣವನ್ನು ತನ್ನ ಪ್ರಿಯಕರ ದೇವ್ಗೆ ನೀಡಿರುವುದಾಗಿ ನಿವೇದಿತಾ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾಳೆ. ಇದೀಗ ಆಕೆಯ ಪ್ರಿಯಕರನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Laxmi News 24×7