ಬೆಂಗಳೂರು: ಪಾದರಾಯನಪುರದ ಘಟನೆಯಲ್ಲಿ ಯಾರೇ ತಪ್ಪು ಮಾಡಿದ್ರೂ ಕಠಿಣ ಕ್ರಮ ತೆಗೆದುಕೊಳ್ಳಿ. ಘಟನೆಗೆ ಏನು ಕಾರಣ ಅಂತ ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ.ಹೃದಯ ಸೀಳಿದ್ರೆ ಅಕ್ಷರವಿಲ್ಲ ಅಂತ ತೇಜಸ್ವಿ ಸೂರ್ಯ ಹೇಳಿದ್ದರು. ನಮ್ಮಲ್ಲಿ ಶಿಕ್ಷಣ ಇಲ್ಲ. ಪೊಲೀಸರು ಬಂದರೆ ಬಂಧಿಸುತ್ತಾರೆ ಎಂಬ ಅಜ್ಞಾನವಿದೆ. ಮುಸ್ಲಿಮರು ಅನಕ್ಷರಸ್ಥರು. ಹೀಗಾಗಿ ಕೆಲ ಗೊಂದಲ ಆಗಿರಬಹುದು. ಮುಸ್ಲಿಮರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ ಮನವೊಲಿಸಿ ಕ್ವಾರಂಟೈನ್ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಗಲಾಟೆಯ ಹಿಂದೆ ಬೇರೆಯವರ ಕೈವಾಡ ಇದೆ ಎಂಬ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಗೃಹ ಸಚಿವರಿಗೆ ವಿವಿಧ ಮೂಲಗಳಿಂದ ಮಾಹಿತಿ ಸಿಗುತ್ತದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಕೇರಳ ಮಾದರಿಯಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಮೋದಿ, ಯಡಿಯೂರಪ್ಪ ಬಿಜೆಪಿ ಅಂತ ನೋಡದೇ ಭಾರತದ ಪ್ರಧಾನಿ, ನಮ್ಮ ಮುಖ್ಯಮಂತ್ರಿ ಅಂತ ಸಹಕಾರ ಕೊಡಿ. ಪ್ರಧಾನಿ ಮೋದಿಯವರು ಎಲ್ಲ ಧರ್ಮದವರು ಒಂದಾಗಿ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಬಹಳ ಉತ್ತಮವಾಗಿ ಹೇಳಿದ್ದಾರೆ. ಹೀಗಾಗಿ ಭಾರತವನ್ನು ನೋಡಿಕೊಂಡು ಎಲ್ಲರೂ ಸಹಕಾರ ನೀಡಬೇಕು ಎಂದು ಕೇಳಿಕೊಂಡರು.
ಕೊಲೆ ಮಾಡುವುದು ಒಂದೇ. ವಿಷ ಕೊಟ್ಟು ಸಾಯಿಸುವುದು ಒಂದೇ. ಕೊರೊನಾ ಬಂದ್ರೆ ಕುಟುಂಬಕ್ಕೆ ಬರುತ್ತದೆ. ಆತನಿಂದಲೇ ಮಕ್ಕಳಿಗೂ ಬರುತ್ತದೆ. ಗಂಡಾಂತರವೇ ನಮ್ಮ ಮುಂದಿದ್ದು, ಯುದ್ಧಕಿಂತಲೂ ಭೀಕರವಾದ ಪರಿಸ್ಥಿತಿ ಇದೆ. ಆರೋಗ್ಯ ವಿಚಾರದಲ್ಲಿ ರಾತ್ರಿ ಹಗಲು ಒಂದೇ. ಯಾವ ಸಮಯ ಬಂದಾಗಲೂ ಹೋಗಬೇಕು. ನಿನ್ನೆ ರಾತ್ರಿ ಕುಡಚಿಯಿಂದ ಫೋನ್ ಬಂದಿತ್ತು. ದಯವಿಟ್ಟು ಹೋಗಿ ಎಂದು ತಿಳಿಸಿದ್ದೆ. ಪೊಲೀಸರು, ಡಾಕ್ಟರ್ ಗಳು, ಆಶಾ ಕಾರ್ಯಕರ್ತೆಯರು ಬಹಳ ಕಷ್ಟಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.