ಬೆಳಗಾವಿ : ನಗರದ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಫ್ಲೈಓವರ್ (ಮೇಲ್ಸೇತುವೆ) ಯೋಜನೆಯ ಕಾಮಗಾರಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ ಲೋಕೋಪಯೋಗಿ ಇಲಾಖೆಯು 4 ರಿಂದ5 ಕಿಮೀ ದೂರದ ಫ್ಲೈಓವರ್ ಯೋಜನೆಯ ಮೊದಲ ಹಂತಕ್ಕೆ 270 ಕೋಟಿ ರೂ. ಬಿಡುಗಡೆ ಮಾಡಿರುವ ಹಿನ್ನೆಲಟೆ ಟೆಂಡರ್ ಕರೆಯಲಾಗಿದೆ. ಆಗಸ್ಟ್‌ನಲ್ಲಿ ಟೆಂಡರ್ ಪ್ರಕ್ರಿಯೇ ಪೂರ್ಣಗೊಳ್ಳಲಿದ್ದು, ಸೆಪ್ಟಂಬರ್‌ನಲ್ಲಿ ಕಾಮಗಾರಿ ಆರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಮೇಲ್ಸೇತುವೆ ಮೊದಲ ಹಂತದ ಅನುದಾನ ಜತೆಗೆ ಎರಡನೇ ಹಂತದಲ್ಲಿ 250 ಕೋಟಿ ರೂ. ಅನುದಾನ ಮೀಸಲಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಅಂತಿಮ ವಿನ್ಯಾಸ (ಡಿಸೈನ) ಸಿದ್ಧಪಡಿಸಿ ರಾಜ್ಯ ಸಚಿವ ಸಂಪುಟದ ಅನುಮೋದನೆಗೆ ಕಳುಹಿಸಲಾಗುವುದು. ಒಟ್ಟಿನಲ್ಲಿ ಒಂದೂವರೆ ವರ್ಷದ ಅವಧಿಯಲ್ಲಿಯೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೇಲ್ಸೇತುವೆ ಕಾಮಗಾರಿ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರು, ವಿದ್ಯುತ್, ಸಾರಿಗೆ ಸಂಚಾರಕ್ಕೆ ಸಮಸ್ಯೆ ಎದುರಾಗದಂತೆ ಹಾಗೂ ಎಲ್ಲಿಯೂ ಮರಗಳನ್ನು ಕಡಿಯದಂತೆ ಯೋಜನೆ ರೂಪಿಸಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಮರಗಳನ್ನು ಸುರಕ್ಷಿತವಾಗಿ ಬೇರೆ ಕಡೆ ಸ್ಥಳಾಂತರಿಸಲು ಪ್ರಯತ್ನಿಸಲಾಗುವುದು.ಸಾರ್ವಜನಿಕ ಸ್ಥಳಗಳು ಹಾಗೂ ಸರ್ಕಾರಿ ಜಾಗಗಳಲ್ಲಿ 1 ರಿಂದ 2 ಕಿಲೋಮೀಟರ ವ್ಯಾಪ್ತಿಯೊಳಗೆ ಪ್ರತಿಯೊಂದು ಮರವನ್ನು ಟ್ರಾನ್ಸ್‌ಲೊಕೇಟ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾತನಡಿ, ನಗರದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಪರ್ಯಾಯ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರವು 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಸಾರ್ವಜನಿಕರು ಸಹಕರಿಸಬೇಕು.
ಈ ಫ್ಲೈಓವರ ಯೋಜನೆ ಪೂರ್ಣಗೊಂಡ ಬಳಿಕ ಬೆಳಗಾವಿಯ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ. ಪ್ರತಿದಿನ ಸಾವಿರಾರು ವಾಹನಗಳು ಎದುರಿಸುವ ಟ್ರಾಫಿಕ ಸಮಸ್ಯೆ ಕಡಿಮೆಯಾಗಲಿದ್ದು, ನಗರದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ತಿಳಿಸಿದರು.
ಜಿಪಂ ಸಿಇಒ ರಾಹುಲ ಶಿಂಧೆ, ಪಾಲಿಕೆ ಆಯುಕ್ತ ಕಾರ್ತಿಕ್.ಎಂ. ವಿವಿಧ ಇಲಾಖೆ ಅಧಿಕಾರಿಗಳು ಇತರರಿದ್ದರು.
Laxmi News 24×7