ನವದೆಹಲಿ: E20 ಜೊತೆಗೆ E10 ಪೆಟ್ರೋಲ್ ಸಿಗಬೇಕೆಂಬ ಬೇಡಿಕೆ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಲಭ್ಯವಾಗಿದೆ. ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಪೂರೈಕೆ ಮಾಡುವುದು ಪ್ರಾಯೋಗಿಕವಾಗಿ ಜಾರಿಗೆ ತರುವುದು ಕಷ್ಟಕರ ಎಂದು ತೈಲ ಸಚಿವಾಲಯದ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ತೈಲ ಮಾರುಕಟ್ಟೆ ಕಂಪನಿಗಳಿಗೆ ವಿವಿಧ ರೀತಿಯ ಪೆಟ್ರೋಲ್ ಮಿಶ್ರಣಗಳನ್ನು ದಾಸ್ತಾನು ಮಾಡುವುದು ಮತ್ತು ಮಾರಾಟ ಮಾಡುವುದು ಹೆಚ್ಚುವರಿ ಕಾರ್ಯಾಚರಣೆ ಹಾಗೂ ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ. ವಿವಿಧ ದರ್ಜೆಯ ಇಂಧನಗಳ ಸಂಗ್ರಹಣೆ, ಸಾರಿಗೆ ಮತ್ತು ಪೈಪ್ಲೈನ್ ಮೂಲಕ ಸಾಗಾಟಕ್ಕೆ ಪ್ರತ್ಯೇಕ ಮೂಲಸೌಕರ್ಯವನ್ನು ನಿರ್ವಹಿಸುವುದು ವಿಶೇಷವಾಗಿ ಸವಾಲಾಗಿ ಪರಿಣಮಿಸಬಹುದು ಎಂದು ಹೇಳಿದೆ.
ಒಂದೇ ಮಳಿಗೆಯಲ್ಲಿ ಹಲವು ಮಾದರಿಯ ಪೆಟ್ರೋಲ್ ರೂಪಾಂತರಗಳನ್ನು ಮಾರಾಟ ಮಾಡುವುದರಿಂದ ಅಕ್ರಮ ಅಥವಾ ದುಷ್ಕೃತ್ಯಗಳಿಗೆ ಹೆಚ್ಚಿನ ಅವಕಾಶ ಸಿಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
E20 ಇಂಧನವನ್ನು ಪರಿಚಯಿಸಿದ ಸಂದರ್ಭದಲ್ಲೂ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ವಿವಿಧ ಪೆಟ್ರೋಲ್ ಮಿಶ್ರಣಗಳನ್ನು ಲಭ್ಯವಾಗಿಸುವ ಸಾಧ್ಯತೆಯ ಬಗ್ಗೆ ವ್ಯಾಪಕವಾಗಿ ಪರಿಶೀಲಿಸಲಾಗಿತ್ತು. ಆ ಸಮಯದಲ್ಲಿ, ಬಹು ದರ್ಜೆಯ ಇಂಧನಗಳನ್ನು ನಿರ್ವಹಿಸುವಲ್ಲಿ ಎದುರಾಗುವ ಸಾಗಾಣಿಕೆ (ಲಾಜಿಸ್ಟಿಕಲ್) ಮತ್ತು ಕಾರ್ಯಾಚರಣೆಯ ಅಡೆತಡೆಗಳನ್ನು ಉದ್ಯಮದ ಪಾಲುದಾರರು ಮೌಲ್ಯಮಾಪನ ಮಾಡಿದ್ದರು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಪ್ರಸ್ತುತ ಇ20 ಪೆಟ್ರೋಲ್ ಅನ್ನು ಕಡ್ಡಾಯಗೊಳಿಸಿರುವುದರಿಂದ, ಹಳೆಯ ವಾಹನಗಳ ಸುರಕ್ಷತೆಗಾಗಿ ಇ10 ಪೆಟ್ರೋಲ್ ಅನ್ನು ಮರಳಿ ತರಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ದೇಶದ ಮುಖ್ಯ ಆರ್ಥಿಕ ಸಲಹೆಗಾರರಾದ (CEA) ವಿ. ಅನಂತ ನಾಗೇಶ್ವರನ್ ಅವರು ಹಳೆಯ ದ್ವಿಚಕ್ರ ವಾಹನಗಳ ರಕ್ಷಣೆಗಾಗಿ ಇ20 ಜೊತೆಗೆ ಇ10 ಇಂಧನವನ್ನೂ ಲಭ್ಯವಾಗಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು.
Laxmi News 24×7