ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿದೇಶಿ ಶಕ್ತಿಗಳ ನೆರವಿನಿಂದ ಪ್ರಧಾನಿಯಾಗಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಹತಾಶರಾಗಿದ್ದು, ತಾವು ಮಾಡಿದ ತಪ್ಪುಗಳನ್ನು ಬೇರೆಯವರ ಮೇಲೆ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರಿಗೇ ವಿದೇಶಿ ನಂಟಿದೆ. ಅವರು ಪದೇಪದೆ ವಿದೇಶಕ್ಕೆ ಹೋಗುತ್ತಾರೆ. ಭಾರತ ವಿರೋಧಿ ವಿದೇಶಿ ಶಕ್ತಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ಭಾರತ ವಿರೋಧಿ ಬಣದವರ ಜೊತೆ ಗುರುತಿಸಿಕೊಂಡು ರಾಹುಲ್ ಗಾಂಧಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ. ಜಾರ್ಜ್ ಸೋರೊಸ್ ಅವರ ಜೊತೆಗೂ ಗುರುತಿಸಿಕೊಂಡಿದ್ದಾರೆ. ಸೋರೊಸ್ ಮೂಲಕ ವಿದೇಶಿ ಹಣ ಪಡೆದು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಈ ಹಣದ ಮೂಲಕ ಭಾರತದ ಏಕತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಕಾಂಗ್ರೆಸ್ ಪಕ್ಷಕ್ಕೆ ವಿದೇಶಿ ಹಣ ಹರಿದು ಬರುತ್ತಿದೆ ಎಂದು ದೂರಿದ ಬೊಮ್ಮಾಯಿ, ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಸುಳ್ಳು. ಇಂತಹ ವ್ಯರ್ಥ ಮಾತುಗಳಿಗೆ ಜನ ಗಮನ ಕೊಡುವುದಿಲ್ಲ ಎಂದು ಹೇಳಿದ್ದಾರೆ.
Laxmi News 24×7