Breaking News
Home / ಜಿಲ್ಲೆ / ಅನಂತಕುಮಾರ್ ಕುಟುಂಬ ಕಡೆಗಣನೆ, ಬಿಜೆಪಿಯಲ್ಲಿ ಶುರುವಾಯ್ತು ಅಸಮಾಧಾನ

ಅನಂತಕುಮಾರ್ ಕುಟುಂಬ ಕಡೆಗಣನೆ, ಬಿಜೆಪಿಯಲ್ಲಿ ಶುರುವಾಯ್ತು ಅಸಮಾಧಾನ

Spread the love

ಬೆಂಗಳೂರು,ಜೂ.8-ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಪಕ್ಷವನ್ನು ಬೆಳೆಸಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿ.ಅನಂತಕುಮಾರ್ ಅವರ ಕುಟುಂಬವನ್ನು ಕಡೆಗಣಿಸುತ್ತಿರುವುದಕ್ಕೆ ಪಕ್ಷದ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿ ಬಿಜೆಪಿಯನ್ನು ನಗರಪ್ರದೇಶದಿಂದ ಹಳ್ಳಿಹಳ್ಳಿಗೂ ಕೊಂಡೊಯ್ದ ಕೀರ್ತಿ ಅನಂತ್‍ಕುಮಾರ್ ಅವರಿಗೆ ಸಲ್ಲುತ್ತದೆ.

ಕಳೆದ ವರ್ಷ ಕ್ಯಾನ್ಸರ್ ಕಾಣಿಸಿಕೊಂಡು ಅನಂತ್‍ಕುಮಾರ್ ನಿಧನರಾದ ಮೇಲೆ ಅವರ ಕುಟುಂಬವನ್ನು ಸಂಪೂರ್ಣವಾಗಿ ಬಿಜೆಪಿ ನಾಯಕರು ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದಾರೆ. ಇದರ ಪರಿಣಾಮ ಅನಂತಕುಮಾರ್ ಅವರು ಬೆಳೆಸಿದ 3 ಮತ್ತು 4ನೇ ಹಂತದ ನಾಯಕರು ಪಕ್ಷದ ನಿಲುವಿಗೆ ನೊಂದುಕೊಂಡಿದ್ದಾರೆ.

2018ರ ಮೇನಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸತತ ಆರು ಬಾರಿ ಬಿಜೆಪಿ ಕಮಲವನ್ನು ಅರಳಿಸಿದ್ದ ಅನಂತಕುಮಾರ್ ಅವರು ನಿಧನರಾದ ಮೇಲೆ ಈ ಕ್ಷೇತ್ರದಿಂದ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‍ಗೆ ನೀಡಬೇಕೆಂಬ ಕೂಗು ಕೇಳಿಬಬಂದಿತ್ತು.

ಇನ್ನೇನು ತೇಜಸ್ವಿನಿ ಅನಂತಕುಮಾರ್ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿದ ಬೆನ್ನಲ್ಲೇ ಅಚ್ಚರಿ ಬೆಳವಣಿಗೆ ಎಂಬಂತೆ ಈ ಕ್ಷೇತ್ರಕ್ಕೆ ತೇಜಸ್ವಿನಿ ಸೂರ್ಯ ಅವರನ್ನು ಕಣಕ್ಕಿಳಿಸಲಾಯಿತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದ ಅನಂತಕುಮಾರ್ ಪತ್ನಿಯನ್ನು ಹೇಗೋ ವರಿಷ್ಠರು ಸಮಾಧಾನಪಡಿಸಿದ್ದರು.

ಪಕ್ಷದಲ್ಲಿ ಯಾವುದಾದರೊಂದು ಪ್ರಮುಖ ಹುದ್ದೆ ಸಿಗಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ನೆಪ ಮಾತ್ರಕ್ಕೆ ಹಿರಿಯ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಇದೀಗ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಿರಾಯಾಸವಾಗಿ ಗೆಲ್ಲಲು ಅವಕಾಶವಿದೆ. ಪಕ್ಷ ಕಟ್ಟಿ ಬೆಳೆಸಿದ ಅನಂತಕುಮಾರ್ ಅವರ ಪತ್ನಿಗೆ ರಾಜ್ಯಸಭೆಗಾದರೂ ಸ್ಥಾನ ಕಲ್ಪಿಸಬೇಕಿತ್ತೆಂಬ ಕೂಗು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಶನಿವಾರ ನಡೆದ ಕೋರ್‍ಕಮಿಟಿ ಸಭೆಯಲ್ಲಿ ಸೌಜನ್ಯಕ್ಕಾದರೂ ತೇಜಸ್ವಿನಿ ಹೆಸರನ್ನು ಶಿಫಾರಸ್ಸು ಮಾಡದೆ ಮತ್ತೊಮ್ಮೆ ಪರೋಕ್ಷವಾಗಿ ಅವಮಾನಕ್ಕೀಡು ಮಾಡಲಾಗಿದೆ.

ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಪಕ್ಷದ ಮುಖಂಡರು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಬೇಸತ್ತಿರುವ ಅವರು ಪಕ್ಷದ ಚಟುವಟಿಕೆಗಳಿಂದ ತುಸು ದೂರವಾಗಿ ತಮ್ಮದೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಒಂದೂವರೆ ದಶಕಗಳಿಂದಲೂ ತೇಜಸ್ವಿನಿ ಅನಂತಕುಮಾರ್ ಅಧಮ್ಯಚೇತನ ಟ್ರಸ್ಟ್ ಮೂಲಕ ಸಾವಿರಾರು ಮಕ್ಕಳಿಗೆ ನೆರವಾಗುತ್ತಿದ್ದಾರೆ. ಅಲ್ಲದೆ ಪರಿಸರ ಜಾಗೃತಿ ಕುರಿತಂತೆ ಅವರಿಗೆ ಅಪಾರವಾದ ಆಸಕ್ತಿ ಇದೆ.

ಹೀಗಾಗಿಯೇ ತಮ್ಮ ಟ್ರಸ್ಟ್ ಮೂಲಕ ಸಂಘಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವುದು, ಪರಿಸರ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅಭಿಯಾನ, ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ, ಹೆಣ್ಣುಮಕ್ಕಳಿಗೆ ಶಿಕ್ಷಣ, ಸಬಲೀಕರಣ, ಸಮಾಜದಲ್ಲಿ ಮಹಿಳೆಯರ ಪಾತ್ರ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ.

ರಾಜ್ಯ ನಾಯಕರ ಕೊಂಡಿ: ಅಂದಹಾಗೆ ದೆಹಲಿಯಲ್ಲಿ ಪ್ರಭಾವಿಯಾಗಿರುವ ಕರ್ನಾಟಕ ಮೂಲದ ಪ್ರಮುಖರೊಬ್ಬರು ತೇಜಸ್ವಿನಿ ಅನಂತಕುಮಾರ್ ಬೆಳವಣಿಗೆಗೆ ಪ್ರಬಲ ಅಡ್ಡಿಯಾಗಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಲೋಕಸಭೆ ಚುನಾವಣೆಯಲ್ಲೂ ತೇಜಸ್ವಿನಿಗೆ ಟಿಕೆಟ್ ಕೊಡಿಸಲು ಪ್ರಬಲ ಅಡ್ಡಿಯಾಗಿದ್ದೇ ಇವರು. ಇದೀಗ ರಾಜ್ಯಸಭೆ ಚುನಾವಣೆಗೂ ಟಿಕೆಟ್ ಕೈತಪ್ಪುವುದಕ್ಕೂ ಅವರ ಪ್ರಭಾವವೇ ಕಾರಣ ಎನ್ನಲಾಗುತ್ತಿದೆ.

ಮೇಲ್ನೋಟಕ್ಕೆ ಅನಂತಕುಮಾರ್- ಯಡಿಯೂರಪ್ಪ ಬಾಯಿ-ಬಾಯಿ ಎನ್ನುವಂತಿದ್ದರೂ. ಒಳಗೊಳಗೆ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದರು. ಆದರೆ ಪಕ್ಷದ ವಿಚಾರಕ್ಕೆ ಬಂದರೆ ಎಂದೂ ಕೂಡ ಇಬ್ಬರು ಲಕ್ಷ್ಮಣರೇಖೆ ದಾಟಲಿಲ್ಲ. ಅನಂತಕುಮಾರ್ ರಾಷ್ಟ್ರ ರಾಜಕಾರಣಕ್ಕೆ ಸೀಮಿತವಾದರೆ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. ಹೀಗಾಗಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ತೋರ್ಪಡಿಕೆಗಾದರೂ ನಾವಿಬ್ಬರು ಒಂದೇ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸುತ್ತಿದ್ದರು.

ಅನಂತಕುಮಾರ್ ನಿಧನರಾದ ಮೇಲೆ ಯಡಿಯೂರಪ್ಪ ಕೂಡ ಆ ಕುಟುಂಬದ ಬಗ್ಗೆ ಮೃದುಧೋರಣೆ ಹೊಂದಿದ್ದಾರೆ. ಲೋಕಸಭೆ ಚುನಾವಣೆ ಹಾಗೂ ರಾಜ್ಯಸಭೆಗೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಕೊಡುವುದರ ಬಗ್ಗೆ ಸಕಾರಾತ್ಮಕವಾಗಿದ್ದರು ಎನ್ನಲಾಗುತ್ತಿದೆ.  ಆದರೆ ದೆಹಲಿಯಲ್ಲಿದ್ದೇ ಕರ್ನಾಟಕ ರಾಜಕಾರಣವನ್ನು ನಿಯಂತ್ರಿಸಲು ಸತತ ಪ್ರಯತ್ನ ನಡೆಸುತ್ತಿರುವ ಪ್ರಭಾವಿಯೊಬ್ಬರ ಮಧ್ಯಪ್ರವೇಶ ತೇಜಸ್ವಿನಿ ಅನಂತಕುಮಾರ್ ಅವರ ರಾಜಕೀಯ ಭವಿಷ್ಯಕ್ಕೆ ಮೊಗ್ಗಲು ಮುಳ್ಳಾಗಿ ಪರಿಣಮಿಸಿದೆ.

ಇನ್ನು ಅನಂತಕುಮಾರ್ ಹೆಸರಿನಲ್ಲಿ ಬೆಳೆದ ಈಗಿನ ಎರಡನೇ ಮತ್ತು 3ನೇ ಹಂತದ ನಾಯಕರು ಕೂಡ ಮೌನಕ್ಕೆ ಶರಣಾಗಿರುವುದು ತೇಜಸ್ವಿನಿ ಅವರಿಗೆ ಹಿನ್ನಡೆಯಾಗಲು ಕಾರಣವಾಗಿದೆ.


Spread the love

About Laxminews 24x7

Check Also

ದೆಹಲಿ-ಬೆಳಗಾವಿ ನೇರ ವಿಮಾನ ಸಂಚಾರ ಸೇವೆ ಡಿ.9ರಿಂದ ಸ್ಥಗಿತಕ್ಕೆ ಜನಾಕ್ರೋಶ; ಹುಬ್ಬಳ್ಳಿ ರಾಜಕಾರಣಿಗಳ ಪ್ರಭಾವ ಎಂದು ಆರೋಪ

Spread the loveಬೆಳಗಾವಿ: ದೆಹಲಿ-ಬೆಳಗಾವಿ ನೇರ ವಿಮಾನ ಸಂಚಾರ ಸೇವೆಯನ್ನು ಡಿಸೆಂಬರ್​ 9ರಿಂದ ಸ್ಥಗಿತಗೊಳಿಸಲು ಕೇಂದ್ರ ವಿಮಾನಯಾನ ಸಚಿವಾಲಯ ನಿರ್ಧಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ