Breaking News
Home / ಜಿಲ್ಲೆ / ಮೂರು ಆಸ್ಪತ್ರೆಗೆ ಅಲೆದಾಡಿ ಬೆಂಗ್ಳೂರಿನ ವೃದ್ಧ ಸಾವು – ಕೊನೆಗೆ ಕೊರೊನಾ ಪರೀಕ್ಷೆ

ಮೂರು ಆಸ್ಪತ್ರೆಗೆ ಅಲೆದಾಡಿ ಬೆಂಗ್ಳೂರಿನ ವೃದ್ಧ ಸಾವು – ಕೊನೆಗೆ ಕೊರೊನಾ ಪರೀಕ್ಷೆ

Spread the love

– ಸಂಪರ್ಕಕ್ಕೆ ಬಂದಿದ್ದ 20 ಮಂದಿಗೆ ಕ್ವಾರಂಟೈನ್
– ಟಾಯ್ಲೆಟ್‍ನಲ್ಲೇ ಕುಸಿದು ಬಿದ್ದಿದ್ದ ವೃದ್ಧ
– ಸೋಮವಾರ ಸಂಜೆ ಕೊರೊನಾ ದೃಢ

ಬೆಂಗಳೂರು: ಕೊರೊನಾ ಸೋಂಕಿತರ ಸಾವು ಕರ್ನಾಟಕದಲ್ಲಿ 8ಕ್ಕೆ ಏರಿದ್ದು, ಕಳೆದ ದಿನವೇ ಇಬ್ಬರು ಒಂದೇ ದಿನ ಮೃತಪಟ್ಟಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯ 65 ವರ್ಷದ ವೃದ್ಧ ಮೂರು ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಮೃತಪಟ್ಟಿದ್ದಾರೆ.

ಭಾನುವಾರ ಮೃತ ವೃದ್ಧ ಕಫ, ಕೆಮ್ಮು ಎಂದು ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಆತನಿಗೆ ನ್ಯೂಮೋನಿಯಾ ಲಕ್ಷಣ ಕಾಣಿಸಿಕೊಂಡಿದೆ ಅಂತ ವೈದ್ಯರು ಕೊರೊನಾ ಪರೀಕ್ಷೆಗೆ ಮುಂದಾಗಿದ್ದಾರೆ. ಈ ವೇಳೆ ವೈದ್ಯರು ವೃದ್ಧನಿಗೆ ಅಡ್ಮಿಟ್ ಆಗಿ ಎಂದು ತಿಳಿಸಿದ್ದಾರೆ. ಆದರೆ ವೃದ್ಧ ಅಡ್ಮಿಟ್ ಆಗಲ್ಲ, ನಾನು ಜಯದೇವ ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾರೆ.

ವೃದ್ಧ ಜಯದೇವದ ರೆಗ್ಯೂಲರ್ ರೋಗಿ ಆಗಿದ್ದರು. ಆದರೆ ಜಯದೇವ ಆಸ್ಪತ್ರೆಯಲ್ಲೂ ರಾಜೀವ್ ಗಾಂಧಿಗೆ ಹೋಗಿ ಎಂದು ರೆಫರ್ ಮಾಡಿದ್ದಾರೆ. ಆದರೂ ವೃದ್ಧ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಬಳಿಕ ಅಲ್ಲಿಯೂ ರಾಜೀವ್ ಗಾಂಧಿಗೆ ರೆಫರ್ ಮಾಡಿದ್ದಾರೆ. ಕೊನೆಗೆ ವೃದ್ಧ ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಎರಡನೇ ಬಾರಿ ಆಸ್ಪತ್ರೆಗೆ ಬಂದಾಗ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಕೊನೆಗೆ ವೃದ್ಧ ಭಾನುವಾರ ರಾತ್ರಿ 8:30 ರ ವೇಳೆಗೆ ಅಡ್ಮಿಟ್ ಆಗಿದ್ದಾರೆ.

ಅಡ್ಮಿಟ್ ಆದ ಬಳಿಕ ವೃದ್ಧ ಸೋಮವಾರ ಬೆಳಗ್ಗೆ ವಾರ್ಡಿನಲ್ಲಿದ್ದ ಟಾಯ್ಲೆಟ್‍ಗೆ ತೆರಳಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ವೈದ್ಯರು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ವೃದ್ಧ ವಾರ್ಡ್ ನಂಬರ್ 132ರ ನಿವಾಸಿಯಾಗಿದ್ದು, ಸೋಮವಾರ ಸಂಜೆ ಪರೀಕ್ಷಾ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಸದ್ಯಕ್ಕೆ ವೃದ್ಧ ಭೇಟಿ ನೀಡಿದ ಆಸ್ಪತ್ರೆಯ ವೈದ್ಯರು ಹಾಗೂ ಆತ ಯಾವುದರಲ್ಲಿ ಪ್ರಯಾಣ ಬೆಳೆಸಿದ್ದ ಎಂಬ ಎಲ್ಲ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಕೊರೊನಾಗೆ 65 ವರ್ಷದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಸೋಂಕಿತನ ಜೊತೆ 20 ಜನ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವವರನ್ನ ಕ್ವಾರಂಟೈನ್‍ನಲ್ಲಿ ಇಡಲು ಬಿಬಿಎಂಪಿ ಮುಂದಾಗಿದೆ. ಅಲ್ಲದೇ ವೃದ್ಧ ಮೃತಪಟ್ಟ ಬೆನ್ನಲ್ಲೇ ಅತ್ತಿಗುಪ್ಪೆ ಮನೆಗೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಮೃತ ವೃದ್ಧ ಸೀಲ್‍ಡೌನ್ ಆಗಿರುವ ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ ಗಳ ಪಕ್ಕದಲ್ಲೇ ನೆಲೆಸಿದ್ದು ಆತಂಕ ಹೆಚ್ಚಾಗಿದೆ.

ಮೊದಲು ಮೊದಲು ಎದೆನೋವು ಬಂದಾಗ ನಿರ್ಲಕ್ಷ್ಯ ಮಾಡಿದ್ದೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೆ ಅಸಡ್ಡೆ ತೋರಿ, ಸಾವಿನ ಅಂಚಿನಲ್ಲಿದ್ದಾಗ ಕೊರೊನಾ ಟೆಸ್ಟ್ ಮಾಡಲಾಗಿದೆ. ಸಾವಿಗೂ ಮುನ್ನ ಹಲವರನ್ನು ಸಂಪರ್ಕಿಸಿರುವುದರಿಂದ ಇದೀಗ ವೃದ್ಧನ ಸಾವು ತಲೆನೋವಾಗಿದೆ. ಸದ್ಯಕ್ಕೆ ಆರೋಗ್ಯ ಇಲಾಖೆ ಮನೆಯಲ್ಲಿರುವ ಮಕ್ಕಳು ಸೇರಿದಂತೆ ಅಕ್ಕಪಕ್ಕದವರ ಮೇಲೆ ನಿಗಾ ಇಟ್ಟಿದೆ.

ಹೃದಯಸಂಬಂಧಿ ಕಾಯಿಲೆ ಇರುವಲ್ಲಿ ಈಗ ಕೊರೊನಾ ಪಾಸಿಟಿವ್ ಹೆಚ್ಚಾಗಿ ಕಾಣಿಸುತ್ತಿದೆ. ಉಸಿರಾಟದ ತೊಂದರೆಯಂತೆ ಹೃದಯ ಸಂಬಂಧಿ ಕಾಯಿಲೆ ಕೂಡ ಈಗ ಅಪಾಯಕಾರಿಯಾಗುತ್ತಿದೆ ಎಂದು ಜಯದೇವ ನಿರ್ದೇಶಕ ಡಾ ಮಂಜುನಾಥ್ ಸರ್ಕಾರದ ಗಮನಕ್ಕೆ ತಂದಿದ್ದರು. ಬಹುತೇಕರಲ್ಲಿ ಹೃದಯ ಸಂಬಂಧಿ ಕಾಯಿಲೆ ಇರೋರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಭಾನುವಾರ ದಾಖಲಾಗಿ ಸೋಮವಾರ ಸಾವನ್ನಪ್ಪಿದ ವೃದ್ಧ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.


Spread the love

About Laxminews 24x7

Check Also

ಮೂರು ಸೇತುವೆಗಳು ಜಲಾವೃತ :ಪ್ರವಾಹ ಭೀತಿಯಲ್ಲಿ ಗ್ರಾಮಸ್ಥರು

Spread the loveಮಹಾಲಿಂಗಪುರ: ಬಾಗಲಕೋಟ ಜಿಲ್ಲೆಯ ಮುಧೋಳ ಮತ್ತು ನೂತನ ರಬಕ” ಬನಹಟ್ಟಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ನೀರಿಕ್ಷಿತ ಪ್ರಮಾಣದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ