Breaking News

ದರ್ಶನ್‌ಗೆ ಬಿಗ್ ಶಾಕ್- ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ಮಾಫಿ ಸಾಕ್ಷ್ಯ ದಾಖಲು

Spread the love

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ನಟ ದರ್ಶನ್  ಮತ್ತು ಇತರ ಆರೋಪಿಗಳಿಗೆ ಭಾರೀ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ 14ನೇ ಆರೋಪಿ (A-14) ಪ್ರದೋಷ್ ಸೋಮವಾರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಅಧಿಕೃತವಾಗಿ ಮಾಫಿ ಸಾಕ್ಷ್ಯ ಹೇಳಿಕೆ ದಾಖಲಿಸಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರದೋಷ್‌  ಅವರನ್ನು ಸೆಷನ್ಸ್ ಕೋರ್ಟ್‌ಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ದರ್ಶನ್  ಪರ ವಕೀಲರು ಪ್ರದೋಷ್ ಹೇಳಿಕೆ ದಾಖಲಿಸಿಕೊಳ್ಳುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹೇಳಿಕೆ ದಾಖಲಾತಿಯ ಪ್ರಕ್ರಿಯೆಯನ್ನು ಕನಿಷ್ಠ 10 ದಿನಗಳ ಕಾಲ ಮುಂದೂಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ದರ್ಶನ್ ಪರ ವಕೀಲರ ಅರ್ಜಿಗೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಶನಿವಾರವೇ ಸೆಷನ್ಸ್ ಕೋರ್ಟ್ ಇವರ ಮುಂದೂಡಿಕೆ ಅರ್ಜಿಯನ್ನು ವಜಾಗೊಳಿಸಿದೆ. ಆದರೂ ಪದೇಪದೆ ಇದೇ ಮನವಿಯನ್ನು ತರುತ್ತಿದ್ದಾರೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ತ್ವರಿತಗತಿಯ ವಿಚಾರಣೆಗೆ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ವಾದ ಮಂಡಿಸಿದರು. ಎಸ್‌ಪಿಪಿ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು, ದರ್ಶನ್ ವಕೀಲರ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. 

ಆಕ್ಷೇಪ ತಿರಸ್ಕರಿಸಿದ ಬೆನ್ನಲ್ಲೇ ನ್ಯಾಯಾಧೀಶರು ಕೋರ್ಟ್ ಹಾಲ್‌ನಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿ, ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ಹೇಳಿಕೆಯನ್ನು ದಾಖಲಿಸಿಕೊಂಡರು. ರೇಣುಕಾಸ್ವಾಮಿ ಕೊಲೆಯ ಸಂಚು ಹೇಗೆ ರೂಪಿಸಲಾಯಿತು, ಅದರಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಪಾತ್ರವೇನು ಎಂಬಿತ್ಯಾದಿ ಸ್ಫೋಟಕ ವಿವರಗಳನ್ನು ಪ್ರದೋಷ್ ನ್ಯಾಯಾಧೀಶರ ಮುಂದೆ ವಿವರಿಸಿದ್ದಾರೆ ಎನ್ನಲಾಗಿದೆ.

ಪ್ರದೋಷ್ ನೀಡಿದ ಸಂಪೂರ್ಣ ಹೇಳಿಕೆಯನ್ನು ಜೈಲಿನಲ್ಲೇ ಇದ್ದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ (VC) ಮೂಲಕ ನೇರವಾಗಿ ಆಲಿಸಿದ್ದಾರೆ. ಪ್ರದೋಷ್ ಹೇಳಿಕೆ ದಾಖಲಾತಿ ಪ್ರಕ್ರಿಯೆ ಇಂದಿಗೆ ಅಪೂರ್ಣಗೊಂಡಿದ್ದು, ಮಂಗಳವಾರವೂ ಮುಂದುವರಿಯಲಿದೆ. ಪ್ರಮುಖ ಆರೋಪಿಯೊಬ್ಬ ಮಾಫಿ ಸಾಕ್ಷಿಯಾಗಿ ನೀಡುತ್ತಿರುವ ಈ ಸಾಕ್ಷ್ಯವು ವಿಚಾರಣೆ ವೇಳೆ ದರ್ಶನ್ ಮತ್ತು ಗ್ಯಾಂಗ್‌ಗೆ ಭಾರಿ ಹಿನ್ನಡೆಯಾಗುವ ಸಾಧ್ಯತೆಯಿದೆ.


Spread the love

About Laxminews 24x7

Check Also

ಮೈಸೂರು ದಸರಾ – ಯತೀಂದ್ರ ಅಬ್ಬರಕ್ಕೆ ಡಿಕೆಶಿ ಬ್ರೇಕ್‌!

Spread the loveಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಆರಂಭದ ಹೊಸ್ತಿಲಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಂತೆ ಕಾಣುತ್ತಿದೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ