ಶಿವಮೊಗ್ಗ: ಶಿಕಾರಿಪುರದಲ್ಲಿ ಸೆ.30 ರಂದು ಭಾರತ್ ಜೋಡೋ ನೆನಪಿನಯಾತ್ರೆ (ಭಾರತ್ ಜೋಡೋ 2.0) ನಡೆಯಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿಕಾರಿಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 4 ವರ್ಷದ ಹಿಂದೆ ದೇಶವನ್ನು ಒಗ್ಗೂಡಿಸಲು ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದರು. ಸೆ.30 ರಂದು ರಾಜ್ಯದ ಗುಂಡ್ಲುಪೇಟೆಗೆ ಪಾದಯಾತ್ರೆ ಆಗಮಿಸಿತ್ತು. ಅದರ ನೆನಪಿಗೆ ಭಾರತ್ ಜೋಡೋ ನೆನಪಿನಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸೆ.30ರ ಬೆಳಗ್ಗೆ ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. ಮತ್ತಿಕೋಟೆ- ನೆಲವಾಗಿಲು ಮಾರ್ಗವಾಗಿ ಶಿಕಾರಿಪುರಕ್ಕೆ ಪಾದಯಾತ್ರೆ ತಲುಪಲಿದೆ. ಬಳಿಕ ಎಪಿಎಂಸಿ ಸಭಾಂಗಣದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷರಾದ ಹರಿಪ್ರಸಾದ್ ಸೇರಿದಂತೆ ಪ್ರಮುಖ ನಾಯಕರು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದು ಪಕ್ಷದ ಕಾರ್ಯಕ್ರಮ ಎಲ್ಲಾ ಮುಖಂಡರನ್ನ ಕರೆಯುತ್ತೇವೆ. ಶಿಕಾರಿಪುರ ಗೆಲ್ಲೋದೆ ನಮ್ಮ ಅಜೆಂಡಾ. ಇಲ್ಲಿಂದಲೇ ಹೋರಾಟ ಪ್ರಾರಂಭವಾಗಲಿದೆ. ಇದೊಂದು ರಾಜಕೀಯ ಸಂದೇಶ ಸಾರುವ ಕಾರ್ಯಕ್ರಮ. ರಾಜ್ಯದಲ್ಲಿ ಮರಳಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವ ದಿನ. ಶಿಕಾರಿಪುರದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವುದಕ್ಕೆ ನಾವೆಲ್ಲರೂ ಪಣ ತೊಡುವ ದಿನ ಎಂದರು.
ರಾಹುಲ್ ಜೊತೆ ಹೆಜ್ಜೆ ಹಾಕಿದ್ದು ನಮ್ಮ ಪುಣ್ಯ
“ರಾಹುಲ್ ಗಾಂಧಿ ಅವರ ಜೊತೆ ನಾವೆಲ್ಲ ಹೆಜ್ಜೆ ಹಾಕಿದ್ದು ನಮ್ಮ ಪುಣ್ಯ. ಜನಸಾಮಾನ್ಯರ ಜೊತೆಯಲ್ಲಿ ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕಿದ್ದು ದೇಶವನ್ನು ಒಗ್ಗೂಡಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು. ರಾಹುಲ್ ಗಾಂಧಿ ಅವರ ಪುಣ್ಯದ ಹೆಜ್ಜೆಗಳ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದನ್ನು ನಾವು ಹೆಮ್ಮೆಯಿಂದ ಹಾಗೂ ಗೌರವದಿಂದ ಸ್ಮರಿಸುತ್ತೇವೆ,” ಎಂದು ಮಧು ಬಂಗಾರಪ್ಪ ಹೇಳಿದರು.
ಶಿಕಾರಿಪುರದಿಂದಲೇ ‘ರಣಕಹಳೆ’
ಶಿಕಾರಿಪುರದಲ್ಲೇ ಪಾದಯಾತ್ರೆ ಆಯೋಜಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಭಾರತ್ ಜೋಡೋ ಪಾದಯಾತ್ರೆ ಸಂಬಂಧ ಪಕ್ಷದೊಳಗೆ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ರಾಜ್ಯದಲ್ಲಿ ಎರಡು ಕಡೆ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಚರ್ಚೆಯಾಗಿತ್ತು. ಶಿಕಾರಿಪುರ ನಮಗೆ ಮುಖ್ಯವಾಗಿದ್ದು, ಇಲ್ಲಿಂದಲೇ ರಣಕಹಳೆ ಮೊಳಗಿಸಲು ನಿರ್ಧರಿಸಲಾಗಿದೆ ಎಂದರು.
ವಿಜಯೇಂದ್ರ ಪಾದಯಾತ್ರೆಗೆ ತಿರುಗೇಟು
ತಮ್ಮ ಕಾರ್ಯಕ್ರಮದ ದಿನವೇ ಬಿ.ವೈ. ವಿಜಯೇಂದ್ರ ಅವರು ಪಾದಯಾತ್ರೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ. ಭ್ರಷ್ಟಾಚಾರದ ವಿರುದ್ಧ ಅವರು ಪಾದಯಾತ್ರೆ ಮಾಡಬೇಕು. “ಜಿಲ್ಲೆಯಲ್ಲಿ 500 ಎಕರೆ ಲೂಟಿ ಕತೆ ಬಿಚ್ಚಿಡಬೇಕಾ? ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.
ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಯಡಿಯೂರಪ್ಪ ಅವರನ್ನು ಹೇಗೆ ಸೋಲಿಸಿದರು ಗೊತ್ತಿಲ್ಲವೇ? ಸೊರಬದಲ್ಲಿ ನಾನು ಎಷ್ಟು ಅಂತರದಿಂದ ಗೆದ್ದಿದ್ದೇನೆ ಎಂಬುದನ್ನು ನೋಡಲಿ. ವಿಜಯೇಂದ್ರ ಕೊನೆಯ ಕ್ಷಣದಲ್ಲಿ ಹೇಗೋ ಬಚಾವಾಗಿದ್ದಾರೆ. ಈ ಸಲ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದರು.
“ಸೊರಬದಲ್ಲಿ ಗೆದ್ದು ಬನ್ನಿ ಎಂದು ಅವರ ಸಹೋದರ ರಾಘವೇಂದ್ರ ಹೇಳುತ್ತಾರೆ. ತಾವು ಹೇಗೆ ಗೆದ್ದು ಬಂದಿದ್ದೀರಿ? ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿಲ್ಲವೇ?” ಎಂದು ತಿರುಗೇಟು ನೀಡಿದರು.
ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ
ಮುಖ್ಯ ಚುನಾವಣಾ ಆಯುಕ್ತರು ಯಾವುದೇ ರಾಜಿ ಆಗಬಾರದು. ಅವರ ರಾಜೀನಾಮೆಯನ್ನು ಎಲ್ಲರೂ ಕೇಳುತ್ತಿದ್ದೇವೆ. ಕಾಂಗ್ರೆಸ್ ಪಕ್ಷ, ಝೆನ್ ಜೀ ಸಮೂಹ ಎಲ್ಲರೂ ಕೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪಾರದರ್ಶಕವಾಗಿ ಆಗಬೇಕು. ಚುನಾವಣಾ ಆಯೋಗದ ಗೌರವ ಉಳಿಸುವ ಕೆಲಸ ಆಗಬೇಕು. ಈ ಕೂಡಲೇ ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಾನು ಸೊರಬದಲ್ಲಿ 40 ಸಾವಿರ ಲೀಡ್ನಲ್ಲಿ ಗೆದ್ದಿದ್ದೆನೆ. ಮುಂದಿನ ಚುನಾವಣೆ ಪ್ರಾಮಾಣಿಕವಾಗಿ ನಡೆಯುತ್ತದೆ ಎಂದು ಅನ್ನಿಸುತ್ತಿಲ್ಲ. ಹಾಗಾಗೀ ನಾವೆಲ್ಲಾ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
Laxmi News 24×7