ನವದೆಹಲಿ, ಫೆ.4- ರಾಷ್ಟ್ರಪಿತ ಮಹಾತ್ಮಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಂಸದ ಅನಂತ್‍ಕುಮಾರ್ ಹೆಗ್ಡೆ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಶಿಸ್ತುಕ್ರಮ ಜರುಗಿಸುವುದು ಖಚಿತ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟಿಲ್ ಹೇಳಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮಗಾಂಧಿ ಹಾಗೂ ಸ್ವತಂತ್ರ ಹೋರಾಟಗಾರರ ವಿರುದ್ಧ ಇಂತಹ ಹೇಳಿಕೆಯನ್ನು ಯಾರೊಬ್ಬರೂ ನೀಡಬಾರದು.
ಹೆಗ್ಡೆ ಅವರ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಶಿಸ್ತುಕ್ರಮ ಖಚಿತ ಎಂಬ ಸುಳಿವು ನೀಡಿದರು. ಅವರಿಗೆ ಕ್ಷಮೆ ಯಾಚಿಸುವಂತೆ ಈಗಾಗಲೇ ಪಕ್ಷದ ಮುಖಂಡರು ಸೂಚನೆ ಕೊಟ್ಟಿದ್ದಾರೆ. ತಾವು ನೀಡಿರುವ ಹೇಳಿಕೆಗೆ ಬೇಷರತ್ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ಪಕ್ಷವು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷನಾಗಿ ನಾನು ಕೂಡ ಕ್ಷಮೆ ಕೇಳುವಂತೆ ಸೂಚನೆ ಕೊಟ್ಟಿದ್ದೇನೆ. ತಾವು ಹೇಳಿರುವ ಮಾತಿಗೆ ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳಬೇಕು. ವಿಥಂಡವಾದ ಇಲ್ಲವೆ ನಾನು ಹೇಳಿದ್ದೇ ಸರಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ.
ಸಚಿವ ಸ್ಥಾನ ಆಕಾಂಕ್ಷಿಗಳು ಕೈ ತಪ್ಪಿದಾಗ ಅಸಮಾಧಾನಗೊಳ್ಳುವುದು ಎಲ್ಲ ಪಕ್ಷಗಳಲ್ಲೂ ಇದ್ದೇ ಇರುತ್ತದೆ. ನಿನ್ನೆ ಕೆಲವು ಶಾಸಕರು ಸಭೆ ನಡೆಸಿರುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ. ನಮಗೆ ಇಲ್ಲವೆ ನಮ್ಮ ಭಾಗಕ್ಕೆ ಮಂತ್ರಿಸ್ಥಾನ ಕೊಡಿ ಎಂದು ಕೇಳುವುದು ತಪ್ಪಲ್ಲ. ಯಾರಿಗೆ ಯಾವ ಸಂದರ್ಭದಲ್ಲಿ ಏನು ಸ್ಥಾನ ಕೊಡಬೇಕೋ ಪಕ್ಷ ಅದನ್ನು ಕೊಡುತ್ತದೆ.
ಸಂಪುಟ ವಿಸ್ತರಣೆ ಹಾಗೂ ಮಂತ್ರಿ ಮಂಡಲಕ್ಕೆ ಯಾರನ್ನು ತೆಗೆದುಕೊಳ್ಳಬೇಕೆಂಬುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಅದರಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.