ಬೆಳಗಾವಿ: ಕೌಶಲಪೂರ್ಣ ಮಾನವ ಸಂಪನ್ಮೂಲಕ್ಕೆ ಜಾಗತಿಕ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಸಂಸ್ಥೆಯಲ್ಲಿ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಸಿಗಲಿವೆ ಎಂದು ಕೇಂದ್ರದ ಪ್ರಾಂಶುಪಾಲ ಯಲ್ಲಪ್ಪ ಸವದತ್ತಿ ತಿಳಿಸಿದರು.
ನಗರದ ವಾರ್ತಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಕರಣ ಮತ್ತು ಅಚ್ಚುಶಾಸ್ತ್ರದಲ್ಲಿ ಉತ್ತಮ ಗುಣಮಟ್ಟದ ತರಬೇತಿ, ಉಪಕರಣ ಅಚ್ಚು ಮತ್ತು ಎರಕಗಳ ತಯಾರಿಕೆ, ಜಿಟಿಟಿಸಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ನಾಲ್ಕು ವರ್ಷದ ಕೈಗಾರಿಕಾ ತರಬೇತಿಯನ್ನು ಕಡ್ಡಾಯವಾಗಿ ಪಡೆಯಲು ವಿವಿಧ ಕೈಗಾರಿಕೆಗಳಿಗೆ ತರಬೇತಿ ಭತ್ಯೆಯೊಂದಿಗೆ ನಿಯೋಜಿಸಲಾಗುವುದು.
ನಾಲ್ಕು ವರ್ಷದ ಕೈಗಾರಿಕಾ ತರಬೇತಿ ಕಡ್ಡಾಯವಾಗಿದ್ದರಿಂದ ಹಲವಾರು ಕಂಪನಿಗಳು ಸಂಸ್ಥೆಗೆ ಆಗಮಿಸಿ ಕ್ಯಾಂಪಸ್ ಸಂರ್ದಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜಿಟಿಟಿಸಿ ಸಂಸ್ಥೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು ಎಲ್ಲ ರೀತಿಯ ತಾಂತ್ರಿಕ ಸೌಲಭ್ಯಗಳಿರುತ್ತವೆ ಎಂದರು.
ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಪ್ರವೇಶಾತಿಗಳು ಪ್ರಾರಂಭವಾಗಿದ್ದು, ಮೇ 10 ಪ್ರವೇಶಾತಿಗೆ ಅಂತಿಮ ದಿನವಾಗಿದೆ. ಪ್ರತಿ ವರ್ಷ 150 ವಿದ್ಯಾರ್ಥಿಗಳಿಗೆ ಪೂರ್ಣಾವಧಿ ಹಾಗೂ 500 ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಲಾಗುತ್ತದೆ. ಸಂಸ್ಥೆಯಿಂದ ಸುಮಾರು 1011 ವಿದ್ಯಾರ್ಥಿಗಳು ಡಿಪ್ಲೊಮಾ ತರಬೇತಿ ಪೂರ್ಣಗೊಳಿಸಿ ಪ್ರತಿಷ್ಠಿತ ಕೈಗಾರಿ ಕೆಗಳಲ್ಲಿ ಉತ್ತಮ ವೇತನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಸ್ಥೆಯ ಸಮನ್ವಯಾಧಿಕಾರಿ ಬಿ.ಜಿ.ಮೊಗೇದ, ರಾಮನಾಥ, ಆಡಳಿತಾಧಿಕಾರಿ ಬಸವರಾಜ ಪಾಟೀಲ ಇತರರಿದ್ದರು.
Laxmi News 24×7