ತಿರುವನಂತಪುರ (ಕೇರಳ): ‘ಅದೃಷ್ಟ ಹುಡುಕುವವರಿಗೆ ಸಿಹಿಸುದ್ದಿ! ಈ ಓಣಂಗೆ ನಮ್ಮಲ್ಲಿಗೆ ಬನ್ನಿ, ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ರೀತಿಯ ಅತಿದೊಡ್ಡ ಜಾಕ್ಪಾಟ್ ಗೆಲ್ಲಿ, 25 ಕೋಟಿ ರೂ.ಗಳನ್ನು ಮನೆಗೆ ತೆಗೆದುಕೊಂಡು ಹೋಗಿ…’
– ಹೀಗೆ ಎನ್ನುತ್ತಿದೆ ಕೇರಳ ಸರ್ಕಾರ. ಈ ಮೊದಲು ಗಲ್ಫ್ ರಾಷ್ಟ್ರಗಳಿಂದ ಹಣದ ಹೊಳೆಯೇ ಕೇರಳಕ್ಕೆ ಹರಿದುಬರುತ್ತಿತ್ತು. ಆದರೆ ಕರೊನಾದಿಂದಾಗಿ 10 ಲಕ್ಷಕ್ಕೂ ಅಧಿಕ ಮಂದಿ ಕೇರಳಿಗರು ಉದ್ಯೋಗ ಕಳೆದುಕೊಂಡು ಗಲ್ಫ್ ರಾಷ್ಟ್ರಗಳಿಂದ ತಾಯ್ನಾಡಿಗೆ ವಾಪಸಾಗಿದೆ. ಅದರ ನಡುವೆ ಕರೊನಾದಿಂದಾಗಿ ಪ್ರವಾಸೋದ್ಯಮಕ್ಕೂ ಕುತ್ತು ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸವನ್ನು ತುಂಬಿಸಿಕೊಳ್ಳಲು ಅನ್ಯಮಾರ್ಗ ಹುಡುಕುತ್ತಿರುವ ಕೇರಳದ ಕಮ್ಯುನಿಸ್ಟ್ ಸರ್ಕಾರ ಲಾಟರಿಯ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಅತಿದೊಡ್ಡ ಲಾಟರಿ ಯೋಜನೆಯನ್ನು ಹಮ್ಮಿಕೊಂಡಿದೆ.
ಲಾಟರಿಯಿಂದಾಗಿ ಹಲವಾರು ಮಂದಿ ಬೀದಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಲಾಟರಿಯನ್ನು ಬ್ಯಾನ್ ಮಾಡಿವೆ. ಆದರೆ ಕೇರಳದಲ್ಲಿ ಲಾಟರಿ ಬ್ಯಾನ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಲಾಟರಿ ಇಲಾಖೆಯು ಓಣಂ ಬಂಪರ್ ಲಾಟರಿ 2022 ಕ್ಕೆ ಸರ್ಕಾರದ ಅನುಮೋದನೆಯನ್ನು ಪಡೆದುಕೊಂಡಿದೆ, ಪ್ರಥಮ ಬಹುಮಾನವಾಗಿ 25 ಕೋಟಿ ರೂಪಾಯಿ, ದ್ವಿತೀಯ ಬಹುಮಾನ 5 ಕೋಟಿ ಹಾಗೂ 10 ತೃತೀಯ ಬಹುಮಾನ ತಲಾ 1 ಕೋಟಿ ರೂಪಾಯಿಗಳ ಲಾಟರಿ ಯೋಜನೆ ಇದಾಗಿದೆ. ಇದು ಒಟ್ಟು 126 ಕೋಟಿ ರೂಪಾಯಿ ಬಹುಮಾನದ ಯೋಜನೆ. 2019 ರಿಂದ ಮೊದಲ ಬಹುಮಾನವಾಗಿ 12 ಕೋಟಿ ರೂ.ಗಳನ್ನು ನೀಡುತ್ತ ಬರಲಾಗಿದ್ದು, ಇದೀಗ ಈ ಮೊತ್ತವನ್ನು 25 ಕೋಟಿ ರೂಪಾಯಿಗೆ ಏರಿಸಿದೆ.