ಬೆಂಗಳೂರು, ಡಿ.20- ರಸ್ತೆ ಬಳಕೆದಾರರ ಸುರಕ್ಷತೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಪ್ರವರ್ತನ ಚಟುವಟಿಕೆಗಳನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗ ಆಪರೇಷನ್ ಸರ್ಪ್ರೈಸ್ ಚೆಕ್ ಕಾರ್ಯಾಚರಣೆ ಪ್ರಾರಂಭಿಸಿದ್ದು ಕೇವಲ ಎರಡು ಗಂಟೆಯಲ್ಲಿ 23,90,900 ರೂ. ದಂಡ ಸಂಗ್ರಹಿಸಲಾಗಿದೆ.
ನಗರದ 44 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿನ್ನೆ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಆಪರೇಷನ್ ಸರ್ಪ್ರೈಸ್ ಚೆಕ್ ಕಾರ್ಯಾಚರಣೆ ಹಮ್ಮಿಕೊಂಡು ಒಟ್ಟು 178 ಸ್ಥಳಗಳಲ್ಲಿ 5123 ವಿವಿಧ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡು 23,90,900 ರೂಪಾಯಿಗಳ ದಂಡವನ್ನು ಸಂಗ್ರಹಿಸಲಾಗಿದೆ ಎಂದು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತ ಡಾ|| ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಕಾರ್ಯಾಚರಣೆಗೆ ಆಯ್ಕೆ ಮಾಡಿಕೊಂಡ 178 ಸ್ಥಳಗಳು ಸಾಮಾನ್ಯವಾಗಿ ಪೊಲೀಸರು ಸಂಚಾರ ನಿಯಮಗಳನ್ನು ದಾಖಲಿಸದೆ ಇರುವ ಸ್ಥಳಗಳಾಗಿರುವ ಜೊತೆಗೆ ರಸ್ತೆ ಬಳಕೆದಾರರು ಅಪಾಯ ಸನ್ನಿವೇಶಗಳನ್ನು ಎದುರಿಸುತ್ತಿದ್ದು ಇದನ್ನು ತಡೆಯುವ ಉದ್ದೇಶದಿಂದ ಇಂತಹ ಹೊಸ ಜಾಗಗಳಲ್ಲಿ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮುಂದಿನ ದಿನಗಳಲ್ಲಿಯೂ ಸಹ ಅನಿರೀಕ್ಷಿತ ಮತ್ತು ಆಶ್ಚರ್ಯಕರ ಕಾರ್ಯಾಚರಣೆಗಳನ್ನು ಹಮ್ಮಿಕೊಂಡು ಹೆಚ್ಚು ನಿಯಮ ಉಲ್ಲಂಘನೆ ಮತ್ತು ಅಪಘಾತ ಕಂಡು ಬರುವ ಸ್ಥಳಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು.
Laxmi News 24×7