Breaking News

ಮಾಫಿಯಾ, ಅಶಿಸ್ತು ಸಹಿಸಲ್ಲ: ಮೊದಲ ದಿನವೇ ಬೆಂಗಳೂರು ಪೊಲೀಸರಿಗೆ ಹಿತೇಂದ್ರ ಎಚ್ಚರಿಕೆ

Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಐವರು ನೂತನ ಪೊಲೀಸ್ ಆಯುಕ್ತರ ನೇಮಕ ಹಾಗೂ ನೂತನ ಕಮಿಷನರೇಟ್ ವ್ಯವಸ್ಥೆ ಜಾರಿಯಾದ ಬೆನ್ನಲ್ಲೇ, ನಗರದ ಮೊದಲ ಮುಖ್ಯ ಪೊಲೀಸ್ ಆಯುಕ್ತರಾಗಿ  ಅಧಿಕಾರ ವಹಿಸಿಕೊಂಡಿರುವ ಆರ್. ಹಿತೇಂದ್ರ ಅವರು ಮೊದಲ ದಿನವೇ ಫುಲ್ ಆಕ್ಟಿವ್ ಆಗಿದ್ದಾರೆ.

ಬೆಳಗ್ಗೆಯೇ ಕಚೇರಿಯಲ್ಲಿ ಐವರು ನೂತನ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಅವರು, ಇಲಾಖೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆ ಕಾಪಾಡುವ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಆರ್. ಹಿತೇಂದ್ರ ಅವರು, “ಪೊಲೀಸ್ ಮ್ಯಾನುವಲ್‌ನಲ್ಲಿ ಏನು ನಿಯಮಗಳಿವೆಯೋ ಅಷ್ಟು ಕೆಲಸವನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ರೀತಿಯ ಅಶಿಸ್ತನ್ನು ನಾನು ಸಹಿಸುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಾನೂನುಬದ್ಧ ಕೆಲಸವನ್ನು ಮಾತ್ರ ಮಾಡಬೇಕು. ಅದನ್ನು ಬಿಟ್ಟು ಅಕ್ರಮ ಚಟುವಟಿಕೆಗಳು, ಮಾಫಿಯಾಗಳ ಜೊತೆ ಕೈಜೋಡಿಸುವುದು ಹಾಗೂ ಭ್ರಷ್ಟಾಚಾರದಲ್ಲಿ ತೊಡಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪು ಮಾಡುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ರೌಡಿ ಸ್ಕ್ವಾಡ್ ಇದೆ ಅಂತ ಯಾರೂ ಮೈಮರೆಯಬೇಡಿ. ಎಲ್ಲಾ ಐದು ಕಮಿಷನರ್‌ಗಳು ತಮ್ಮ ವ್ಯಾಪ್ತಿಯ ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿ” ಎಂದು ಹಿತೇಂದ್ರ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಇತಿಹಾಸದ ಪುಟ:
ಬೆಂಗಳೂರಿಗೆ ಐವರು ಆಯುಕ್ತರು ಹಾಗೂ ಓರ್ವ ಮುಖ್ಯ ಆಯುಕ್ತರನ್ನು ನೇಮಿಸುವ ಈ ನೂತನ ವ್ಯವಸ್ಥೆಯೊಂದಿಗೆ, ದಶಕಗಳ ಇತಿಹಾಸ ಹೊಂದಿದ್ದ ಏಕೈಕ ‘ಬೆಂಗಳೂರು ಪೊಲೀಸ್ ಆಯುಕ್ತರ’ ಹುದ್ದೆ ಇತಿಹಾಸದ ಪುಟ ಸೇರಿದೆ.

1963ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಸರ್ಕಾರ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ಅಧಿಕೃತವಾಗಿ ರಚಿಸಿತ್ತು. ಅಂದು ಕೇವಲ 37 ಪೊಲೀಸ್ ಠಾಣೆಗಳೊಂದಿಗೆ ಆರಂಭವಾದ ಈ ಕಮಿಷನರೇಟ್‌ಗೆ, ಡಿಐಜಿಪಿ (DIGP) ದರ್ಜೆಯ ಅಧಿಕಾರಿಯಾಗಿದ್ದ ಸಿ. ಚಾಂಡಿ ಅವರು ಮೊದಲ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು.

1963ರಿಂದ ಇಲ್ಲಿಯವರೆಗೆ ಒಟ್ಟು 39 ಐಪಿಎಸ್ ಅಧಿಕಾರಿಗಳು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದ್ದಾರೆ. ಈ ಸುದೀರ್ಘ ಇತಿಹಾಸದಲ್ಲಿ ಹಲವು ವಿಶೇಷ ದಾಖಲೆಗಳೂ ನಿರ್ಮಾಣವಾಗಿವೆ.

1983ರಿಂದ 1986ರವರೆಗೆ ಬರೋಬ್ಬರಿ 3 ವರ್ಷ 9 ತಿಂಗಳ ಕಾಲ ಸೇವೆ ಸಲ್ಲಿಸಿದ ಪಿ.ಜಿ. ಹರ್ಲಂಕರ್ ಅವರು ಬೆಂಗಳೂರಿನ ಅತಿ ದೀರ್ಘಾವಧಿಯ ಪೊಲೀಸ್ ಆಯುಕ್ತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಅಲೋಕ್ ಕುಮಾರ್ ಅವರು ಅತ್ಯಂತ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದ ದಾಖಲೆ ಹೊಂದಿದ್ದಾರೆ.

ಕೇವಲ 37 ಠಾಣೆಗಳಿಂದ ಆರಂಭವಾದ ಬೆಂಗಳೂರು ಪೊಲೀಸ್ ಕಮಿಷನರೇಟ್, ಇಂದು ನಗರದ ವಿಸ್ತಾರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಐದು ಪ್ರತ್ಯೇಕ ಕಮಿಷನರೇಟ್‌ಗಳಾಗಿ ವಿಭಜನೆಯಾಗುವ ಮೂಲಕ ಹೊಸ ಆಡಳಿತಾತ್ಮಕ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.


Spread the love

About Laxminews 24x7

Check Also

ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ, ವ್ಯವಸ್ಥೆಯೊಳಗೇ ಹೋರಾಟ: ರಾಹುಲ್ ಗಾಂಧಿ

Spread the loveನವದೆಹಲಿ: ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ. ಬದಲಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕವೇ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ