ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪುಡಿರೌಡಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹಾಡಹಗಲೇ ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಂತಹದೊಂದು ಆತಂಕ ಈಗ ಹುಬ್ಬಳ್ಳಿಯ ಜನರನ್ನು ಕಾಡುತ್ತಿದೆ. ಬೆಂಡಿಗೇರಿ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿರುವ ಗಲಾಟೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ರೌಡಿಶೀಟರ್ ಶ್ಯಾಮ್ ಜಾಧವ್ ಕುಟುಂಬ ಮತ್ತು ಸ್ಥಳೀಯ ನಿವಾಸಿ ಬಸವರಾಜ್ ಜಾಧವ್ ಕುಟುಂಬದ ನಡುವೆ ದೊಡ್ಡ ಸಂಘರ್ಷ ನಡೆದಿದೆ. ಈ ವೇಳೆ ಹಾಡಹಗಲೇ ರಸ್ತೆಯಲ್ಲಿ ಲಾಂಗ್ ಮತ್ತು ಮಚ್ಚುಗಳನ್ನು ಪ್ರದರ್ಶಿಸಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ರೌಡಿಗಳು, ಪೊಲೀಸ್ ಠಾಣೆಯಲ್ಲೇ ಪೊಲೀಸರ ಎದುರೇ ಜೀವ ಬೆದರಿಕೆ ಹಾಕಿದ್ದಾರೆ.
ಠಾಣೆಯೊಳಗೇ ರೌಡಿಗಳ ದರ್ಪ ಹೀಗಿದ್ದರೆ, ಸಾಮಾನ್ಯ ಜನರಿಗೆ ರಕ್ಷಣೆ ಕೊಡುವವರು ಯಾರು ಎಂಬ ಪ್ರಶ್ನೆ ಎದ್ದಿದೆ.
ಘಟನೆಯಿಂದ ತೀವ್ರ ಭಯಭೀತರಾಗಿರುವ ಬಸವರಾಜ್ ಜಾಧವ್ ಕುಟುಂಬಸ್ಥರು, ʻರೌಡಿಶೀಟರ್ ಶ್ಯಾಮ್ ಜಾಧವ್ ಕುಟುಂಬದವರು ಸಣ್ಣಪುಟ್ಟ ವಿಚಾರಗಳಿಗೂ ಜಗಳ ತೆಗೆದು ನಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಹಲ್ಲೆ ನಡೆಸಿ ಈಗ ಜೀವ ಬೆದರಿಕೆ ಹಾಕುತ್ತಿದ್ದಾರೆ. ನಮಗೆ ಜೀವಭಯವಿದ್ದು, ಪೊಲೀಸರು ತಕ್ಷಣ ನಮಗೆ ರಕ್ಷಣೆ ನೀಡಬೇಕುʼ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ಹುಬ್ಬಳ್ಳಿ-ಧಾರವಾಡ ಪೊಲೀಸರು ಅಲರ್ಟ್ ಆಗಿದ್ದಾರೆ. ದಕ್ಷಿಣ ವಿಭಾಗದ ಎಸಿಪಿ ಯು.ಬಿ. ಚಿಕ್ಕಮಠ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಸೆಟ್ಲ್ಮೆಂಟ್ ಏರಿಯಾದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಪೊಲೀಸ್ ಬಸ್ಗಳನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
Laxmi News 24×7