Breaking News

ಸರ್ಕಾರಿ ಆತಿಥ್ಯಕ್ಕೆ ನೋ ಎಂದ ಶಾಸಕ ಶರಣಗೌಡ ಕಂದಕೂರ: ಸ್ವಂತ ಖರ್ಚಿನಲ್ಲೇ ಬೆಳಗಾವಿ ಅಧಿವೇಶನಕ್ಕೆ ಹಾಜರು

Spread the love

ಬೆಳಗಾವಿಯಲ್ಲಿ ಡಿ 2 ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಪಡೆಯದೆ, ಸ್ವಂತ ಖರ್ಚಿನಲ್ಲೇ ಪಾಲ್ಗೊಳ್ಳಲು ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ನಿರ್ಧರಿಸಿದ್ದಾರೆ.

ಅಧಿವೇಶನದ ಸಂದರ್ಭದಲ್ಲಿ ಶಾಸಕರಿಗೆ ಸರ್ಕಾರದಿಂದ ಕಲ್ಪಿಸುವ ವಸತಿ, ಊಟೋಪಚಾರ ಹಾಗೂ ಇತರೆ ಭತ್ಯೆಗಳನ್ನು ಸ್ವೀಕರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ವಿಧಾನಸಭಾಧ್ಯಕ್ಷರಿಗೆ ಅಧಿಕೃತ ಪತ್ರ ಬರೆದಿರುವ ಅವರು, ತಮ್ಮ ಹೆಸರಿಗೆ ಯಾವುದೇ ಸರ್ಕಾರಿ ಆತಿಥ್ಯ ಅಥವಾ ಸೌಲಭ್ಯಗಳನ್ನು ಕಾಯ್ದಿರಿಸದಂತೆ ಮನವಿ ಮಾಡಿದ್ದಾರೆ.

ಶರಣಗೌಡ ಕಂದಕೂರ ಅವರು ಕಳೆದ ವರ್ಷದ ಚಳಿಗಾಲದ ಅಧಿವೇಶನದಲ್ಲಿಯೂ ಇದೇ ನಿರ್ಧಾರ ಕೈಗೊಂಡಿದ್ದರು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳದೆ, ಅಧಿವೇಶನದ ಎಲ್ಲಾ ದಿನಗಳಲ್ಲೂ ಹಾಜರಾಗಿ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇದೀಗ ಎರಡನೇ ಬಾರಿಯೂ ತಮ್ಮ ನಿಲುವನ್ನು ಮುಂದುವರಿಸಿದ್ದಾರೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶವೂ ಈ ನಿರ್ಧಾರದ ಹಿಂದಿದೆ. ಕೇವಲ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದರಿಂದ ಈ ಭಾಗದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸದನದಲ್ಲಿ ನಡೆಯುವ ಚರ್ಚೆಗಳು ಕೇವಲ ಮಾತುಗಳಿಗೆ ಸೀಮಿತವಾಗದೆ, ಅವುಗಳ ಆಧಾರದ ಮೇಲೆ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.

ಉತ್ತರ ಕರ್ನಾಟಕದ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಪ್ರಾದೇಶಿಕ ಬೇಡಿಕೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ವಿಭಿನ್ನ ರೀತಿಯಲ್ಲಿ ರವಾನಿಸಲು ಶರಣಗೌಡ ಕಂದಕೂರ ಮುಂದಾಗಿದ್ದಾರೆ.

ಸರ್ಕಾರದ ಸೌಲಭ್ಯಗಳನ್ನು ನಿರಾಕರಿಸಿ ಸ್ವಂತ ಖರ್ಚಿನಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮುಂದಾಗಿರುವ ಜೆಡಿಎಸ್ ಶಾಸಕರ ಈ ನಿರ್ಧಾರ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.


Spread the love

About Laxminews 24x7

Check Also

ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ, ವ್ಯವಸ್ಥೆಯೊಳಗೇ ಹೋರಾಟ: ರಾಹುಲ್ ಗಾಂಧಿ

Spread the loveನವದೆಹಲಿ: ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ. ಬದಲಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕವೇ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ