Breaking News

ಗೃಹಲಕ್ಷ್ಮೀ ಹಣಕ್ಕಾಗಿ ಅಜ್ಜಿಯ ಕೊಲೆ ಮಾಡಿದ ಮೊಮ್ಮಗ; ಸುಳಿವು ನೀಡಿದ್ದು ಗೋಣಿ ಚೀಲ

Spread the love

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ ಹಣದ ವಿಚಾರವಾಗಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸ್ವಂತ ಅಜ್ಜಿಯನ್ನೇ ಕೊಲೆ ಮಾಡಿ, ಶವವನ್ನು ಎರಡು ಗೋಣಿ ಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿ ಡ್ಯಾಂನ ಹಿನ್ನೀರಿನಲ್ಲಿ ಎಸೆದಿದ್ದ ಮೊಮ್ಮಗನನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮವ್ವಾ ಬಾಲಪ್ಪಾ ಸನದಿ (78) ಕೊಲೆಯಾದ ವೃದ್ಧೆ. ಅವರ ಸ್ವಂತ ಮೊಮ್ಮಗ ಭೀಮಪ್ಪಾ ರಾಮಪ್ಪಾ ಸನದಿ (20) ಕೊಲೆ ಆರೋಪದ ಮೇಲೆ ಬಂಧಿತನಾಗಿದ್ದಾನೆ.

ಯಮಕನಮರಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಾವೀದ್ ಎಫ್. ಮುಶಾಪುರಿ ನೇತೃತ್ವದ ತಂಡ ಮತ್ತೊಂದು ಕುತೂಹಲಕಾರಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಹಮ್ಮವ್ವಾ ಅವರು ನ.10ರಂದು ಪಾಶ್ಚಾಪುರ ಸಂತೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದರು. ಆದರೆ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ನಡುವೆ ನ.15ರಂದು ಸಂಜೆ ಜಿನರಾಳ ಗ್ರಾಮದ ಹದ್ದಿಯ ಘಟಪ್ರಭಾ ನದಿ ಡ್ಯಾಂನ ಹಿನ್ನೀರಿನಲ್ಲಿ ಎರಡು ಗೋಣಿ ಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿದ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿತ್ತು.

ಈ ಸಂಬಂಧ ಮೃತಳ ಮಗಳು ಭೀಮವ್ವಾ ಪರಸಪ್ಪಾ ಈರನಟ್ಟಿ ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಗೃಹಲಕ್ಷ್ಮೀ ಹಣಕ್ಕಾಗಿ ಕೊಲೆ!

ಪೊಲೀಸ್ ತನಿಖೆಯ ವೇಳೆ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೃತ ಹಮ್ಮವ್ವಾ ಅವರಿಗೆ ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ತನಗೂ ಪಾಲು ನೀಡುವಂತೆ ಮೊಮ್ಮಗ ಭೀಮಪ್ಪಾ ಕಳೆದ ಕೆಲವು ವರ್ಷಗಳಿಂದ ತಕರಾರು ಮಾಡುತ್ತಿದ್ದನು ಎನ್ನಲಾಗಿದೆ.

ನ.10ರಂದು ಅಜ್ಜಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ ಆರೋಪಿ, ಗವಿಸಿದ್ದೇಶ್ವರ ಗುಡ್ಡಕ್ಕೆ ಕರೆದೊಯ್ದು ಮತ್ತೆ ಗೃಹಲಕ್ಷ್ಮೀ ಹಣ ನೀಡುವಂತೆ ಕೇಳಿದ್ದಾನೆ. ಅಜ್ಜಿ ಹಣ ನೀಡಲು ನಿರಾಕರಿಸಿದಾಗ ಸಿಟ್ಟಿಗೆದ್ದು ಆಕೆಯನ್ನು ಕೆಳಗೆ ನೂಕಿ, ಕುತ್ತಿಗೆ ಹಿಸುಕಿ ಹಾಗೂ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಕೊಲೆ ಬಳಿಕ ಶವವನ್ನು ಗುಡ್ಡದಲ್ಲೇ ಬಿಟ್ಟು ಪಾಶ್ಚಾಪುರಕ್ಕೆ ತೆರಳಿ ಎರಡು ಗೋಣಿ ಚೀಲಗಳನ್ನು ತಂದಿದ್ದಾನೆ. ಅಜ್ಜಿಯ ಬಳಿಯಿದ್ದ ₹2,300 ನಗದು ಹಣವನ್ನು ತೆಗೆದುಕೊಂಡು, ಶವವನ್ನು ಗೋಣಿ ಚೀಲಗಳಲ್ಲಿ ತುಂಬಿದ್ದಾನೆ. ಬಳಿಕ ರಾತ್ರಿ ಬೈಕ್‌ನಲ್ಲಿ ಶವವನ್ನು ಸಾಗಿಸಿ ಜಿನರಾಳ ಗ್ರಾಮದ ಸಮೀಪದ ಘಟಪ್ರಭಾ ನದಿ ಡ್ಯಾಂನ ಹಿನ್ನೀರಿನ ಬಳಿ ತಲುಪಿದ್ದಾನೆ.

ಅಲ್ಲದೆ, ಅಜ್ಜಿಯ ಕೊರಳಲ್ಲಿದ್ದ ಎರಡು ಬಂಗಾರದ ಸರಗಳನ್ನು ಕಿತ್ತುಕೊಂಡು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಗೋಣಿ ಚೀಲಗಳಿಗೆ ಎರಡು ದೊಡ್ಡ ಕಲ್ಲುಗಳನ್ನು ಹಾಕಿ ನೀರಿಗೆ ಎಸೆದಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಗಂಭೀರತೆ ಪರಿಗಣಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಗೋಕಾಕ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಯಮಕನಮರಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಾವೀದ್ ಎಫ್. ಮುಶಾಪುರಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗೋಣಿಚೀಲದ ಮೂಲ ಕೆದಕಿ ಪ್ರಕರಣ ಭೇದಿಸಲಾಗಿದೆ. ಚೀಲ ಮಾರಾಟದ ಅಂಗಡಿ ಸಂಪರ್ಕಿಸಿ ವಿಚಾರಣೆ ನಡೆಸಿದಾಗ ಭೀಮಪ್ಪ ಚೀಲಗಳನ್ನು ಖರೀದಿಸಿದ್ದು ಗೊತ್ತಾಗಿದೆ.


Spread the love

About Laxminews 24x7

Check Also

ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ, ವ್ಯವಸ್ಥೆಯೊಳಗೇ ಹೋರಾಟ: ರಾಹುಲ್ ಗಾಂಧಿ

Spread the loveನವದೆಹಲಿ: ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ. ಬದಲಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕವೇ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ