ಶಬರಿಮಲೆ: ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿಯು ಮತ್ತೊಂದು ಮಹತ್ವದ ಡಿಜಿಟಲ್ ಹೆಜ್ಜೆಯಿಟ್ಟಿದೆ.
ಇನ್ನು ಮುಂದೆ ಭಕ್ತರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯದೆ, ಹೊಸದಾಗಿ ಅಳವಡಿಸಲಾಗಿರುವ ಸ್ವಯಂಚಾಲಿತ ವಿತರಣಾ ಯಂತ್ರಗಳ ಮೂಲಕ ಅರವಣ(Aravana) ಮತ್ತು ಅಪ್ಪಂ ಪ್ರಸಾದವನ್ನುಸುಲಭವಾಗಿ ಖರೀದಿಸಬಹುದಾಗಿದೆ. ವಿಶೇಷವೆಂದರೆ, ಈ ಯಂತ್ರಗಳಲ್ಲಿ ಯುಪಿಐ (UPI) ಮೂಲಕ ಡಿಜಿಟಲ್ ಪಾವತಿ ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಮಂಗಳವಾರ ಸನ್ನಿಧಾನದಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷ ಜಯಕುಮಾರ್ ಅವರು ಈ ನೂತನ ಸ್ವಯಂಚಾಲಿತ ಪ್ರಸಾದ ವಿತರಣಾ ಕೇಂದ್ರಗಳನ್ನು ಉದ್ಘಾಟಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ಪ್ರಸಾದ ವಿತರಣಾ ಕೌಂಟರ್‌ಗಳಲ್ಲಿ ಉಂಟಾಗುವ ವಿಪರೀತ ಜನದಟ್ಟಣೆಯನ್ನು ತಗ್ಗಿಸುವ ಹಾಗೂ ಭಕ್ತರ ಅಮೂಲ್ಯ ಸಮಯವನ್ನು ಉಳಿಸುವ ಉದ್ದೇಶದಿಂದ ಶಬರಿಮಲೆ ದೇಗುಲದ ಆವರಣದ ಐದು ಪ್ರಮುಖ ಸ್ಥಳಗಳಲ್ಲಿ ಈ ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಎಷ್ಟು ಪ್ರಸಾದ ಸಿಗುತ್ತೆ?
ಅರವಣ ಪ್ರಸಾದ: ಪ್ರತಿ ಭಕ್ತರು ಒಂದು ವಹಿವಾಟಿನಲ್ಲಿ ಗರಿಷ್ಠ 5 ಟಿನ್‌ಗಳವರೆಗೆ ಅರವಣ ಪ್ರಸಾದವನ್ನು ಖರೀದಿಸಬಹುದು.
ಅಪ್ಪಂ ಪ್ರಸಾದ: ಒಂದು ಬಾರಿಗೆ ಗರಿಷ್ಠ 10 ಪ್ಯಾಕೆಟ್ ಅಪ್ಪಂ ಪ್ರಸಾದವನ್ನು ಪಡೆಯಲು ಅವಕಾಶವಿದೆ.
ಡಿಜಿಟಲ್ ಪಾವತಿ: ಭಕ್ತರು ನಗದು ರಹಿತವಾಗಿ ಯುಪಿಐ ಸ್ಕ್ಯಾನ್ ಮಾಡುವ ಮೂಲಕ ಕ್ಷಣಾರ್ಧದಲ್ಲಿ ಹಣ ಪಾವತಿಸಿ ಪ್ರಸಾದ ಪಡೆಯಬಹುದು.
ಯಾತ್ರಾರ್ಥಿಗಳಿಗೆ ಸುಗಮ ದರ್ಶನ ಮತ್ತು ಮೂಲಸೌಕರ್ಯ ಒದಗಿಸಲು ದೇವಸ್ವಂ ಮಂಡಳಿಯು ಹಲವು ತಂತ್ರಜ್ಞಾನ ಆಧಾರಿತ ಉಪಕ್ರಮಗಳನ್ನು ಜಾರಿಗೆ ತಂದಿದೆ. ಈಗಾಗಲೇ ನಿಲಕ್ಕಲ್‌ನಲ್ಲಿ ವಾಹನ ಪಾರ್ಕಿಂಗ್ ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಅಲ್ಲದೆ, ಪಂಪಾದಿಂದ ಸನ್ನಿಧಾನದವರೆಗಿನ ಮಾರ್ಗದಲ್ಲಿ ಜನಸಂದಣಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ಎಐ ಆಧಾರಿತ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
Laxmi News 24×7