ಬೆಂಗಳೂರು: ಶೀಲ ಶಂಕಿಸಿ ಪತಿಯೇ ಪತ್ನಿಯ ಬರ್ಬರ ಹತ್ಯೆಗೈದಿರುವ ಘಟನೆ ಮಾರತಹಳ್ಳಿ (Bengaluru Crime) ಪೊಲೀಸ್ ಠಾಣಾ ವ್ಯಾಪ್ತಿಯ ಪಣತ್ತೂರಿನಲ್ಲಿ ನಡೆದಿದೆ.
36 ವರ್ಷದ ದುರ್ಗಮ್ಮ ಕೊಲೆಯಾದ ಮಹಿಳೆ. ಪತಿ 42 ವರ್ಷದ ಬಸವರಾಜು ಕೊಲೆಗೈದ ಆರೋಪಿ.
ದುರ್ಗಮ್ಮ ಮತ್ತು ಬಸವರಾಜು ಸುಮಾರು 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮಕ್ಕಳಿದ್ದಾರೆ. ಹಿಂದೆ ಸಂಭವಿಸಿದ ಅಪಘಾತದಿಂದಾಗಿ ಬಸವರಾಜು ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ದುರ್ಗಮ್ಮ ಹೌಸ್ಕೀಪಿಂಗ್ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು.ಆದರೆ, ಪತ್ನಿಯ ನಡತೆಯ ಬಗ್ಗೆ ಬಸವರಾಜು ಪದೇ ಪದೇ ಅನುಮಾನ ವ್ಯಕ್ತಪಡಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ನಿನ್ನೆ ಕೂಡ ಇದೇ ವಿಚಾರವಾಗಿ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಬಸವರಾಜು ಮನೆಯಲ್ಲಿದ್ದ ಪಿಕಾಸಿಯಿಂದ ದುರ್ಗಮ್ಮ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಮಾರತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಸವರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
Laxmi News 24×7