ರಾಮನಗರ: ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು. ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದ್ದು, ಕೇಂದ್ರ ಸರ್ಕಾರದ ಅನುಮತಿಗಾಗಿ ಮುಖ್ಯಮಂತ್ರಿಗಳು ಕಾಯುತ್ತಿದ್ದಾರೆ. ಕೇಂದ್ರದ ಒಂದು ಭಾಗವಾಗಿರುವ ಹೆಚ್.ಡಿ.ಕುಮಾರಸ್ವಾಮಿ ಗಂಟೆಗೊಂದು ಮಾತನಾಡುವುದನ್ನು ಬಿಟ್ಟು, ತಮ್ಮ ನಾಯಕತ್ವದಲ್ಲೇ ರಾಜ್ಯ ಸರ್ಕಾರವನ್ನು ಕರೆದುಕೊಂಡು ಹೋಗಿ ಅನುಮತಿ ಕೊಡಿಸಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದ್ದಾರೆ.
ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಕಾಂಗ್ರೆಸ್ನವರೇ ಅನುಮತಿ ಪಡೆಯಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ನಾವು ಪ್ರತಿದಿನವೂ ಅನುಮತಿ ಕೇಳುತ್ತಿದ್ದೇವೆ. ಈ ಮಾತನ್ನು ಹೇಳುತ್ತಿರುವವರೇ ಇಂದು ಕೇಂದ್ರ ಸರ್ಕಾರದ ಒಂದು ಭಾಗವಾಗಿದ್ದಾರೆ. ಹಿಂದೆ ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಏನು ಹೇಳಿದ್ದರು ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ. ಅವತ್ತು ನಾನೇ ಅನುಮತಿ ಕೊಡಿಸುತ್ತೇನೆ ಎಂದಿದ್ದರು, ಇವತ್ತು ಹೀಗೆ ಮಾತನಾಡುತ್ತಿದ್ದಾರೆ. ಗಂಟೆಗೊಂದು, ಘಳಿಗೆಗೊಂದು ಮಾತನಾಡುವುದನ್ನು ಬಿಡಲಿ ಎಂದು ವ್ಯಂಗ್ಯವಾಡಿದರು.
ಯೋಜನೆಗೆ ಅನುದಾನ ನೀಡಲು ನಮ್ಮ ಸರ್ಕಾರ ಸಿದ್ಧವಿದೆ. ಕೆಲ ಅಡ್ಡಿ ಆತಂಕಗಳಿರುತ್ತವೆ, ಕೇಂದ್ರ ಅನುಮತಿ ಕೊಟ್ಟರೆ ಯೋಜನೆ ಜಾರಿಯಾಗುತ್ತದೆ. ಈ ಯೋಜನೆಯಿಂದ ರಾಮನಗರ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಕುಮಾರಸ್ವಾಮಿ ಪ್ರತಿನಿಧಿಸುವ ಮಂಡ್ಯ, ನೀವು ಹುಟ್ಟಿದ ಹಾಸನ ಹಾಗೂ ನಿಮ್ಮ ಮನೆ ಇರುವ ಬೆಂಗಳೂರು ನಗರಕ್ಕೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಂಡು ಅನುಮತಿ ಕೊಡಿಸಲಿ ಎಂದು ಆಗ್ರಹಿಸಿದರು.
ಇದೇ ವೇಳೆ, ಸಿಎಂ ಮಂಗಳೂರಿನಲ್ಲಿ ಕ್ಯಾಬಿನೆಟ್ ಮೀಟಿಂಗ್ ಮಾಡಿ ಬ್ಯುಸಿನೆಸ್ ವಿಸ್ತರಣೆ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಕಿಡಿಕಾರಿದ ಡಿ.ಕೆ. ಸುರೇಶ್, ಮೂಳೆ ಇಲ್ಲದ ನಾಲಿಗೆ ಅಂತ ಏನೇನೋ ಮಾತನಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ರನ್ನು ನೆನೆಸಿಕೊಳ್ಳಲಿಲ್ಲ ಎಂದರೆ ಅವರಿಗೆ ಊಟ, ನಿದ್ದೆ ಮತ್ತೊಂದು ಆಗುವುದಿಲ್ಲ. ಅವರು ದೊಡ್ಡವರು, ಬಾಯಿಗೆ ಬಂದಂತೆ ಮಾತನಾಡುತ್ತಾರೆ, ಚಪಲ ಚನ್ನಿಗರಾಯ ಎಂದು ವಾಗ್ದಾಳಿ ನಡೆಸಿದರು
Laxmi News 24×7