Breaking News

ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಹುನ್ನಾರ – ಮಾಧ್ಯಮಗಳ ಸಮ್ಮುಖದಲ್ಲೇ ಎಥೆನಾಲ್‌ ಪರೀಕ್ಷೆ ನಡೆಯಲಿ: ನಿರಾಣಿ ಸವಾಲು

Spread the love

ಬಾಗಲಕೋಟೆ: ರಾಜ್ಯ ಸರ್ಕಾರದ ಆಡಳಿತ, ಅಗತ್ಯ ವಸ್ತುಗಳ ಬೆಲೆ ಏರಿಕೆ, ರಾಜ್ಯದ ಸಾಲದ ಹೊರೆ ಹಾಗೂ ಎಥೆನಾಲ್ ಮಿಶ್ರಣದ ಕುರಿತು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರಗೇಶ್ ನಿರಾಣಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಎಥೆನಾಲ್ ಮಿಶ್ರಣದ ಕುರಿತು ಸಚಿವ ರಿಜ್ವಾನ್ ಅರ್ಷದ್ ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ನಿರಾಣಿ ತಳ್ಳಿಹಾಕಿದ್ದಾರೆ. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಸರ್ಕಾರ ಇಂತಹ ಹುನ್ನಾರ ನಡೆಸುತ್ತಿದೆ. ಕಾಂಗ್ರೆಸ್ ನಾಯಕರ ಆರೋಪ ಸತ್ಯಕ್ಕೆ ದೂರವಾದದ್ದು. ನಾವು ಪರೀಕ್ಷಿಸಿರುವ ಪ್ರಕಾರ ಇ20 (E20) ವಾಹನಗಳಿಗೆ ಕೇವಲ ಶೇ. 20ರಷ್ಟು ಮಾತ್ರ ಎಥೆನಾಲ್ ಮಿಶ್ರಣ ಮಾಡಲಾಗುತ್ತದೆ. ಸರ್ಕಾರ ಒಂದು ಸಮಿತಿ ರಚಿಸಲಿ, ಸಚಿವರು ಹೇಳಿದ ಪೆಟ್ರೋಲ್ ಬಂಕ್‌ನಲ್ಲಿಯೇ ಮಾಧ್ಯಮಗಳ ಸಮ್ಮುಖದಲ್ಲಿ ಸ್ಯಾಂಪಲ್ ಟೆಸ್ಟ್ ಮಾಡೋಣ ಎಂದು ಅವರು ನೇರ ಸವಾಲು ಹಾಕಿದ್ದಾರೆ.

ಎಥೆನಾಲ್ ಉತ್ಪಾದನೆ ಕುರಿತು ವಿವರಿಸಿದ ಅವರು, ಕಬ್ಬು, ಮೆಕ್ಕೆಜೋಳ ಹಾಗೂ ಜೋಳದಿಂದ ಎಥೆನಾಲ್ ತಯಾರಿಸಲಾಗುತ್ತದೆ. ಇಡೀ ದೇಶದಲ್ಲಿಯೇ ನಾವು ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುತ್ತೇವೆ. ಆದರೆ ಬರಗಾಲದ ಹಿನ್ನೆಲೆಯಲ್ಲಿ ಈ ವರ್ಷ ಅಂದಾಜು ಶೇ. 20ರಷ್ಟು ಕಬ್ಬು ಉತ್ಪಾದನೆ ಕಡಿಮೆಯಾಗಿದ್ದು, ಸಕ್ಕರೆ ಉತ್ಪಾದನೆಯೂ ಇಳಿಕೆಯಾಗಿದೆ. ಸಾಂದ್ರತೆ (Density) ಬದಲಾವಣೆಯ ಕಾರಣದಿಂದ ಎಥೆನಾಲ್ ಕೇವಲ ಪೆಟ್ರೋಲ್‌ನಲ್ಲಿ ಮಾತ್ರ ಮಿಶ್ರಣವಾಗುತ್ತದೆ, ಡೀಸೆಲ್‌ನಲ್ಲಿ ಮಿಶ್ರಣವಾಗುವುದಿಲ್ಲ. ಡೀಸೆಲ್‌ನಲ್ಲಿ ಮಿಶ್ರಣ ಮಾಡಲು ‘ಐಸೋ ಬ್ಯುಟನಾಲ್’  ಎಂಬ ಸಂಶೋಧನೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ (SIR) ಬಗ್ಗೆ ನಂಬಿಕೆ ಇಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ, ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಇವಿಎಂ ಮಷೀನ್ ಮೂಲಕವೇ ಆರಿಸಿ ಬಂದಿದೆ. ನಾವು ಬ್ಯಾಲೆಟ್ ಪೇಪರ್ ಮೂಲಕವೇ ನಾಲ್ಕಕ್ಕೆ ನಾಲ್ಕು ವಿಧಾನ ಪರಿಷತ್ ಸ್ಥಾನಗಳನ್ನು ಗೆದ್ದಿದ್ದೇವೆ. ಮತದಾರರ ಪಟ್ಟಿಯಲ್ಲಿ ಏನಾದರೂ ಸಂಶಯವಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಿ. ಅದು ಬಿಟ್ಟು ಜನರ ಮನಸ್ಸನ್ನು ಬೇರೆಡೆ ಸೆಳೆದು ವಿನಾಕಾರಣ ರಾಜಕಾರಣ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಆಹಾರ ಪದಾರ್ಥ, ಬಸ್ ದರ ಹಾಗೂ ಮದ್ಯದ ಬೆಲೆಯನ್ನೂ ಮನಬಂದಂತೆ ಏರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಕಳೆದ 80 ವರ್ಷಗಳಲ್ಲಿಯೇ ಅತಿ ಹೆಚ್ಚು ಸಾಲ ಮಾಡಿದ ಸರ್ಕಾರ ಇದಾಗಿದೆ. ರಾಜ್ಯದ ಬಜೆಟ್ ನಾಲ್ಕೂವರೆ ಲಕ್ಷ ಕೋಟಿ ರೂ. ಇದ್ದರೆ, ಕಾಂಗ್ರೆಸ್ ಸರ್ಕಾರ ನಾಲ್ಕೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದೆ. ಆದರೆ ಕೇಂದ್ರದಲ್ಲಿರುವ ನಮ್ಮ ಸರ್ಕಾರ, ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಸಾಲವನ್ನು ತೀರಿಸುತ್ತಿದೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದ್ದು, ಒಂದು ಕಿಲೋಮೀಟರ್ ರಸ್ತೆಯೂ ನಿರ್ಮಾಣವಾಗಿಲ್ಲ, ಮೂಲಭೂತ ಸೌಕರ್ಯಗಳಿಲ್ಲ ಎಂದು ದೂರಿದ ನಿರಾಣಿ, “ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗ್ಯಾರಂಟಿ ಹೆಸರಿನಲ್ಲಿ 5,000 ಕೋಟಿ ರೂ. ವೆಚ್ಚದ ಲೆಕ್ಕ ನೀಡಲು ತಯಾರಿಲ್ಲ. ನಮ್ಮ ಬಿಜೆಪಿ ಸರ್ಕಾರದ ಕೊನೆಯ ಹಂತದಲ್ಲಿ ಬ್ಯಾಂಕ್ ಬ್ಯಾಲೆನ್ಸ್ 25 ಸಾವಿರ ಕೋಟಿ ರೂ. ಇತ್ತು ಹಾಗೂ ಆಲಮಟ್ಟಿ ಸಂತ್ರಸ್ತರ ಪರಿಹಾರಕ್ಕೆ 5,000 ಕೋಟಿ ರೂ. ಮೀಸಲಿಟ್ಟಿದ್ದೆವು. ಅದನ್ನೆಲ್ಲಾ ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ. ರಾಜ್ಯದಿಂದ ದೊಡ್ಡ ದೊಡ್ಡ ಕಂಪನಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ನನ್ನದೇ ಬಯೋ ಪ್ಲಾಸ್ಟಿಕ್ ತಯಾರಿಕಾ ಘಟಕದ ನಿರ್ಮಾಣಕ್ಕೂ ಸಿದ್ದರಾಮಯ್ಯ ಅವರು ತಿರಸ್ಕರಿಸಿದರು. ಇನ್ನು ಎಷ್ಟೋ ಜನ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲು ತಯಾರಾಗಿದ್ದಾರೆ” ಎಂದು ಹೇಳಿದರು.

ವಿಜಯೇಂದ್ರ ಅವರ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಿರಾಣಿ, “ಸದ್ಯ ನಾನು ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸದ್ಯಕ್ಕೆ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಹೈಕಮಾಂಡ್ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಇದೆಲ್ಲವೂ ನಮ್ಮ ನಾಯಕರಿಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಮುಂದಿನ ವರ್ಷ 3 ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿಕೆಶಿ ಘೋಷಣೆ

Spread the loveಮೈಸೂರು: ಮುಂದಿನ ವರ್ಷ ಮೂರು ದಿನಗಳ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ