ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ಡಿಎ ಸರ್ಕಾರ 1999 ರಲ್ಲಿ ಲೋಕಸಭೆಯಲ್ಲಿ ಕೇವಲ ಒಂದೇ ಒಂದು ಮತದ ಅಂತರದಿಂದ ವಿಶ್ವಾಸಮತ ಸೋತು ಪತನಗೊಂಡಿತ್ತು. ಪತನಗೊಂಡ ಬಳಿಕ ಕಾಂಗ್ರೆಸ್ ಸರ್ಕಾರ ರಚಿಸಲು ಪ್ರಯತ್ನಿಸಿ ವಿಫಲವಾಗಿತ್ತು. ಭಾರೀ ಹೈಡ್ರಾಮಾದ ಬಳಿಕ ಮತ್ತೆ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಏರಿತು. ಈ ಸಂದರ್ಭದಲ್ಲಿ ನಡೆದ ನಾಟಕೀಯ ವಿದ್ಯಮಾನಗಳನ್ನು ಸೋನಿಯಾ ಗಾಂಧಿ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ತೆರೆದಿಟ್ಟಿದ್ದಾರೆ.
ಬಿಡುಗಡೆಯಾದ ತಮ್ಮ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಆತ್ಮಚರಿತ್ರೆಯಲ್ಲಿ, ತಮ್ಮ ರಾಜಕೀಯ ಜೀವನದ ಆರಂಭಿಕ ದಿನಗಳ ಅತ್ಯಂತ ಮಹತ್ವದ ಸಾರ್ವಜನಿಕ ಸನ್ನಿವೇಶವೊಂದರ ಹಿಂದಿನ ಒತ್ತಡವನ್ನು ಅವರು ತೆರೆದಿಟ್ಟಿದ್ದಾರೆ. ಒಳಗೊಳಗೇ ನಡುಗುತ್ತಿದ್ದರೂ ಸಹೋದ್ಯೋಗಿಗಳ ನಡುವೆ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳಲು ತಾವು ಪಟ್ಟ ಶ್ರಮವನ್ನು ಅವರು ವಿವರಿಸಿದ್ದಾರೆ.
1999ರಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ಬಳಿಕ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಭಾರಿ ಸಂಖ್ಯೆಯ ಪತ್ರಕರ್ತರನ್ನು ಎದುರಿಸಲು ನಡೆದು ಬರುವಾಗ ತಮ್ಮ “ಎದೆ ಝಲ್ಲೆಂದಿತ್ತು” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.
ಪುಸ್ತಕದಲ್ಲಿ ಏನಿದೆ?
ಎಐಎಡಿಎಂಕೆ (AIADMK) ಮುಖ್ಯಸ್ಥೆ ಜೆ. ಜಯಲಲಿತಾ ಅವರು ಬೆಂಬಲ ಹಿಂಪಡೆದಿದ್ದರಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಪತನಗೊಂಡಿತ್ತು. ಆ ನಂತರದ ಘಟನೆಗಳನ್ನು ನೆನೆದರೆ ಈಗಲೂ ಆ ಕ್ಷಣಗಳು ಕಣ್ಣಮುಂದೆ ಬರುತ್ತವೆ. ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಾನು ಪತ್ರಕರ್ತರ ಕಡೆಗೆ ನಡೆದು ಬರುವಾಗ ನನ್ನ ಎದೆ ಝಲ್ಲೆಂದಿತ್ತು. ಅಷ್ಟು ದೊಡ್ಡ ಸಂಖ್ಯೆಯ ಮಾಧ್ಯಮದವರನ್ನು ನಾನು ಮೊದಲ ಬಾರಿಗೆ ಎದುರಿಸುತ್ತಿದ್ದೆ. ಸಹೋದ್ಯೋಗಿಗಳು ನನ್ನ ಅಕ್ಕಪಕ್ಕದಲ್ಲೇ ಇದ್ದರೂ, ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳುವುದು ನನಗೆ ಅತ್ಯಂತ ಕಷ್ಟಕರವಾಗಿತ್ತು.

ಆಗಿನ ಪ್ರಮುಖ ವಿರೋಧ ಪಕ್ಷವಾಗಿದ್ದ ನಮ್ಮ ಕಾಂಗ್ರೆಸ್, ಪರ್ಯಾಯ ಸರ್ಕಾರ ರಚಿಸಲು ಪ್ರಾದೇಶಿಕ ಹಾಗೂ ಎಡಪಕ್ಷಗಳೊಂದಿಗೆ ಮಾತುಕತೆ ಆರಂಭಿಸಿತ್ತು. 543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿತ್ತು. ಕಾಂಗ್ರೆಸ್ ಮತ್ತು ನಮ್ಮ ಮಿತ್ರಪಕ್ಷಗಳು 233 ಸಂಸದರ ಬಲವನ್ನು ಹೊಂದಿದ್ದವು ಹಾಗೂ ಇತರರು ನಮಗೆ ಬೆಂಬಲ ನೀಡುವ ಭರವಸೆ ನೀಡಿದ್ದರು. ಅಂತಿಮವಾಗಿ ಸಂಖ್ಯೆಗಳು ಸರಿಹೊಂದುತ್ತವೆ ಎಂಬ ನಂಬಿಕೆಯಿಂದ ನಾನು ರಾಷ್ಟ್ರಪತಿಗಳನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದೆ.
ಆದರೆ ರಾಷ್ಟ್ರಪತಿ ಭವನದ ಹೊರಗೆ ಪತ್ರಕರ್ತರು ನನಗೆ ಕಠಿಣ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. “ಮಿಸೆಸ್ ಗಾಂಧಿ, ನೀವು ಹೇಳುತ್ತಿರುವ 272ರ ಸಂಖ್ಯೆಯನ್ನು ಹೇಗೆ ತಲುಪಿದಿರಿ ಎಂಬುದನ್ನು ವಿವರಿಸಿ?” ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು. “ಈ ಗೊಂದಲಕ್ಕೆ ನಿಮ್ಮ ಪಕ್ಷದ ಅಹಂಕಾರವೇ ಕಾರಣವಲ್ಲವೇ?” ಎಂದು ಮತ್ತೊಬ್ಬರು ಕೇಳಿದರು. ಅಲ್ಲದೆ, ನನ್ನ ಲೆಕ್ಕಾಚಾರ ತಪ್ಪಾಗಿದೆ ಎಂದು ಉನ್ನತ ಮೂಲಗಳು ಭಾವಿಸಿರುವುದಾಗಿಯೂ ವರದಿಗಾರರು ತಿಳಿಸಿದರು.
ಇದಕ್ಕೆ ಉತ್ತರಿಸಿದ್ದ ನಾನು, ಮಿತ್ರಪಕ್ಷಗಳ ನಾಯಕರೊಂದಿಗೆ ಸಮಾಲೋಚಿಸಿ ಈ ಸಂಖ್ಯೆಯನ್ನು ಲೆಕ್ಕ ಹಾಕಲಾಗಿದೆ ಎಂದು ಹೇಳಿದ್ದೆ. “ಸದ್ಯಕ್ಕೆ ನಮಗೆ ಕೆಲವು ಸ್ಥಾನಗಳ ಕೊರತೆ ಇದ್ದರೂ, ಅಗತ್ಯವಿರುವ ಸಂಖ್ಯೆಯನ್ನು ತಲುಪುವ ವಿಶ್ವಾಸವಿದೆ. ಇತರ ಪಕ್ಷಗಳೊಂದಿಗೆ ಮಾತುಕತೆ ಮುಂದುವರಿದಿದೆ” ಎಂದು ನಾನು ಸಮಜಾಯಿಷಿ ನೀಡಿದ್ದೆ.
ಆದರೆ ಕೊನೆಗೆ, ಭರವಸೆ ನೀಡಿದ್ದ ಬೆಂಬಲ ನಮಗೆ ಸಿಗಲೇ ಇಲ್ಲ ಎಂಬುದು ನನಗೆ ತೀವ್ರ ಬೇಸರ ತಂದಿತು. ಮಾತುಕತೆಯಲ್ಲಿ ಭಾಗಿಯಾಗಿದ್ದ ನಾಯಕರ ನಡುವಿನ ಪರಸ್ಪರ ಮಹತ್ವಾಕಾಂಕ್ಷೆಗಳೇ ಈ ವೈಫಲ್ಯಕ್ಕೆ ಕಾರಣವಾಯಿತು. ಮೈತ್ರಿಕೂಟಕ್ಕೆ ಭರಿಸಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿ ಹಲವರು ಪ್ರಧಾನಿಯಾಗಲು ಬಯಸಿದ್ದರು.
ಈ ಬೆಳವಣಿಗೆಗೆ ನಮ್ಮದೇ ಪಕ್ಷದ ಕೆಲವು ಕಾಂಗ್ರೆಸ್ ನಾಯಕರೂ ವಿರೋಧ ವ್ಯಕ್ತಪಡಿಸಿದ್ದರು. ನನಗೆ ಪ್ರಧಾನಿಯಾಗುವ ಯಾವುದೇ ಇಚ್ಛೆ ಇರಲಿಲ್ಲವಾದರೂ, ಬಿಜೆಪಿ ನೇತೃತ್ವದ ಸರ್ಕಾರವನ್ನು ಕೆಳಗಿಳಿಸುವಲ್ಲಿ ನಾನು ತುಂಬಾ ಆತುರಪಟ್ಟೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನಾನು ಬಹಳ ಆತುರಪಟ್ಟಿದ್ದೆ; ಬಲಪಂಥೀಯ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಗುರಿಯತ್ತ ಮಾತ್ರ ನಾನು ಗಮನಹರಿಸಿದ್ದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ಅವರು ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ನನಗೆ ಸಲಹೆ ನೀಡಿದ್ದರು. ನಾನು ಅವರ ಮಾತನ್ನು ಕೇಳಬೇಕಿತ್ತು. ಆದರೆ ಅವರ ಬದಲು, ನಂತರದ ದಿನಗಳಲ್ಲಿ “ಸಂಪೂರ್ಣ ಅಪ್ರಾಮಾಣಿಕ” ಎಂದು ಸಾಬೀತಾದ ಮತ್ತೊಬ್ಬ ನಾಯಕನ ಮಾತನ್ನು ನಂಬಿ ನಾನು ತಪ್ಪು ಮಾಡಿದೆ. ಆ ನಾಯಕ ಯಾರೆಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಿಲ್ಲ.
ನಾವು ಪರ್ಯಾಯ ಸರ್ಕಾರ ನೀಡಲು ವಿಫಲವಾದ ನಂತರ ಬಿಜೆಪಿ ಹೊಸ ಚುನಾವಣೆಗೆ ಮುಂದಾಯಿತು. ಒಂದು ತಿಂಗಳ ಪ್ರಚಾರದ ಬಳಿಕ 20 ಮಿತ್ರಪಕ್ಷಗಳನ್ನು ಒಳಗೊಂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ವಾಜಪೇಯಿ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಮರಳಿತು.
ವಾಜಪೇಯಿ ಸರ್ಕಾರವನ್ನು ಕೆಳಗಿಳಿಸಿದ್ದು ತಪ್ಪೇ ಎಂಬ ಪ್ರಶ್ನೆಗೆ ನನ್ನ ಉತ್ತರವಿಷ್ಟೇ. ನಾವು ಅವರನ್ನು ಕೆಳಗಿಳಿಸಲಿಲ್ಲ, ಅವರ ಮೈತ್ರಿಕೂಟವೇ ಕುಸಿದುಬಿತ್ತು. ಆದರೂ ನನ್ನ ಕಡೆಯಿಂದಾದ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದು ನನ್ನ ಕಡೆಯಿಂದಾದ ತಪ್ಪು ಲೆಕ್ಕಾಚಾರವಾಗಿತ್ತು. ಕೆಲವು ವ್ಯಕ್ತಿಗಳು ನೀಡಿದ್ದ ಭರವಸೆಗಳನ್ನು ನಮ್ಮ ಗುಂಪು ನಂಬಿತ್ತು, ಆದರೆ ಅವು ಈಡೇರಲಿಲ್ಲ.
ಸರ್ಕಾರ ರಚನೆಯ ವೈಫಲ್ಯದ ಬೆನ್ನಲ್ಲೇ 1999ರ ಮೇ ತಿಂಗಳಲ್ಲಿ ನನಗೆ ಮತ್ತೊಂದು ಆಂತರಿಕ ಬಿಕ್ಕಟ್ಟು ಎದುರಾಯಿತು. ವಿದೇಶಿ ಮೂಲದ ವ್ಯಕ್ತಿಯೊಬ್ಬರು ಭಾರತದ ಉನ್ನತ ಹುದ್ದೆಯನ್ನು ಅಲಂಕರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಮೂವರು ಸದಸ್ಯರಿಂದ ನನಗೆ ಪತ್ರ ಬಂದಿತ್ತು. ಸಿಡಬ್ಲ್ಯೂಸಿ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಯಿತು. ಆಗ ನನ್ನ ಕಣ್ಣುಗಳಲ್ಲಿ ನೀರು ತುಂಬಿಬಂದವು, ನಾನು ಸಭೆಯಿಂದ ಹೊರನಡೆದೆ. ಅಧಿಕಾರ ಮತ್ತು ಹುದ್ದೆಯನ್ನು ಕಿತ್ತುಕೊಳ್ಳಲು ನಾನು ರಾಜಕೀಯಕ್ಕೆ ಬಂದಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
Laxmi News 24×7