ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನವೇ ವಾಯುಮಾಲಿನ್ಯದ ಪ್ರಮಾಣ ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿತ್ತು ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಇದರ ನಡುವೆ ದೆಹಲಿ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 500ರ ಗಡಿ ದಾಟಿದೆ.
ಸಿಎಸ್‌ಇ ವರದಿ ಪ್ರಕಾರ, ದೀಪಾವಳಿಗೂ ಮುನ್ನದ ವಾರದಲ್ಲಿ ದೆಹಲಿಯ ಸರಾಸರಿ ಪಿಎಂ 2.5 ಪ್ರಮಾಣ ಪ್ರತಿ ಘನ ಮೀಟರ್‌ಗೆ 236 ಮೈಕ್ರೋಗ್ರಾಂ ದಾಖಲಾಗಿದೆ. ಇದು 2025ರಲ್ಲಿ ದಾಖಲಾಗಿದ್ದ 120 ಮೈಕ್ರೋ ಗ್ರಾಂಗಿಂತ ಶೇ.97ರಷ್ಟು ಹೆಚ್ಚಾಗಿದೆ. 2024ರಲ್ಲಿ ದಾಖಲಾಗಿದ್ದ 179 ಮೈಕ್ರೋ ಗ್ರಾಂಗಿಂತಲೂ ಶೇ.32ರಷ್ಟು ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ದೀಪಾವಳಿ ಪೂರ್ವ ಮಾಲಿನ್ಯ ಅತ್ಯಧಿಕವಾಗಿದೆ ಎಂದು ವರದಿ ಹೇಳಿದೆ.
ಇಂದು ಬೆಳಗ್ಗೆಯೂ ದೆಹಲಿ-ಎನ್‌ಸಿಆರ್‌ನ ಹಲವು ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ಗಾಜಿಯಾಬಾದ್‌ನಲ್ಲಿ 590 ಎಕ್ಯೂಐ ದಾಖಲಾಗಿದ್ದರೆ, ದೆಹಲಿಯ ಆನಂದ್ ವಿಹಾರ್‌ನಲ್ಲಿ ಬೆಳಗ್ಗೆ 8:30ಕ್ಕೆ 558 ಎಕ್ಯೂಐ ದಾಖಲಾಗಿದೆ. ಪಂಜಾಬಿ ಬಾಗ್‌ನಲ್ಲಿ 508, ಫರಿದಾಬಾದ್‌ನ ಸೆಕ್ಟರ್ 11ರಲ್ಲಿ 509 ಹಾಗೂ ನೋಯ್ಡಾದಲ್ಲಿ 495 ಎಕ್ಯೂಐ ದಾಖಲಾಗಿದೆ. ಜನಪಥ್‌ನಲ್ಲಿ 451, ಗುರುಗ್ರಾಮ್‌ನಲ್ಲಿ 400 ಎಕ್ಯೂಐ ದಾಖಲಾಗಿದೆ.
ದೆಹಲಿ ನಗರದ ಸರಾಸರಿ ಎಕ್ಯೂಐ ಹಿಂದಿನ 344ರಿಂದ 299ಕ್ಕೆ ಇಳಿಕೆಯಾಗಿದ್ದರೂ, ಹಲವು ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮಾಣ ಆತಂಕಕಾರಿ ಮಟ್ಟದಲ್ಲಿಯೇ ಮುಂದುವರಿದಿದೆ. ಐಐಟಿ ದೆಹಲಿಯಲ್ಲಿ 380, ಚಾಂದನಿ ಚೌಕ್‌ನಲ್ಲಿ 372, ಐಟಿಒದಲ್ಲಿ 366 ಹಾಗೂ ಬುರಾರಿ ಕ್ರಾಸಿಂಗ್‌ನಲ್ಲಿ 355 ಎಕ್ಯೂಐ ದಾಖಲಾಗಿದೆ.
ವಾಯುಮಾಲಿನ್ಯಕ್ಕೆ ವಾಹನಗಳ ಹೊಗೆ ಪ್ರಮುಖ ಕಾರಣವಾಗಿದ್ದು, ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ಧೂಳು, ಕೈಗಾರಿಕೆಗಳ ಹೊರಸೂಸುವಿಕೆ ಹಾಗೂ ನೆರೆಯ ರಾಜ್ಯಗಳಲ್ಲಿನ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಸಿಎಸ್‌ಇ ವಿಶ್ಲೇಷಣೆ ಪ್ರಕಾರ, ದೆಹಲಿಯ ಸ್ಥಳೀಯ ಮಾಲಿನ್ಯ ಮೂಲಗಳ ಪೈಕಿ ವಾಹನ ಸಂಚಾರದ ಪಾಲು ಶೇ.52ರಷ್ಟಿದೆ. ನಿರ್ಮಾಣ ಚಟುವಟಿಕೆಗಳ ಪಾಲು ಶೇ.7ರಷ್ಟಿದೆ. ವಾಹನ ದಟ್ಟಣೆಯಿಂದ ಹೊರಸೂಸುವ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಸಂಜೆ ಹೆಚ್ಚಾಗಿ ಮಧ್ಯರಾತ್ರಿಯವರೆಗೂ ವಾತಾವರಣದಲ್ಲಿ ಉಳಿಯುತ್ತಿದೆ ಎಂದು ವರದಿ ತಿಳಿಸಿದೆ.
ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಮೂರನೇ ಹಂತದ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಧೂಳು ಸೃಷ್ಟಿಸುವ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಬಿಎಸ್-3 ಪೆಟ್ರೋಲ್ ಹಾಗೂ ಬಿಎಸ್-4 ಡೀಸೆಲ್ ವಾಹನಗಳ ಸಂಚಾರಕ್ಕೂ ಕಡಿವಾಣ ಹಾಕಲಾಗಿದೆ. ಶಾಲೆಗಳಲ್ಲಿ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಅಥವಾ ಆನ್‌ಲೈನ್ ತರಗತಿಗಳ ವ್ಯವಸ್ಥೆ ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಆದರೆ, ನಿರ್ಬಂಧಗಳ ನಡುವೆಯೂ ವಾಹನ ದಟ್ಟಣೆ ಮತ್ತು ಮಾಲಿನ್ಯದಲ್ಲಿ ನಿರೀಕ್ಷಿತ ಇಳಿಕೆ ಕಂಡುಬಂದಿಲ್ಲ ಎಂದು ಸಿಎಸ್‌ಇ ವರದಿ ಆತಂಕ ವ್ಯಕ್ತಪಡಿಸಿದೆ. ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಮಾಸ್ಕ್ ಧರಿಸುವುದು, ಅನಗತ್ಯವಾಗಿ ಹೊರಗೆ ಓಡಾಡುವುದನ್ನು ತಪ್ಪಿಸುವುದು ಹಾಗೂ ಮಾಲಿನ್ಯ ಹೆಚ್ಚಿರುವ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ.
Laxmi News 24×7