Breaking News

ಕಾನ್ಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿತ – 20 ದಿನದ ಹಸುಗೂಸು ಸೇರಿ ಮೂವರು ದುರ್ಮರಣ

Spread the love

ಲಕ್ನೋ: ಮನೆಯ ಮೇಲ್ಛಾವಣಿ ಕುಸಿದು  20 ದಿನದ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ನಡೆದಿದೆ.

ಬೆಳಗ್ಗೆ 8:30ರಿಂದ 9 ಗಂಟೆಯ ನಡುವಿನ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು 60 ವರ್ಷದ ವಿನೋದಿನಿ ಶುಕ್ಲಾ, ಅವರ ಸೊಸೆ 28 ವರ್ಷದ ಅನ್ಶಿಕಾ ಶುಕ್ಲಾ ಹಾಗೂ ಅನ್ಶಿಕಾ ಅವರ 20 ದಿನದ ಮಗು ಆರವ್ ಎಂದು ಗುರುತಿಸಲಾಗಿದೆ. ಅನ್ಶಿಕಾ ಅವರ ಪತಿ 32 ವರ್ಷದ ಹರ್ಷ್ ಶುಕ್ಲಾ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯ ಅವಶೇಷಗಳನ್ನು ತೆರವುಗೊಳಿಸುವ ವೇಳೆ ತಾಯಿ ಅನ್ಶಿಕಾ ತನ್ನ ನವಜಾತ ಮಗುವನ್ನು ರಕ್ಷಿಸಲು ತನ್ನ ದೇಹವನ್ನೇ ಕವಚದಂತೆ ಅಡ್ಡವಿಟ್ಟಿರುವುದು ಬೆಳಕಿಗೆ ಬಂದಿದೆ. ಈ ದೃಶ್ಯ ಸ್ಥಳೀಯರನ್ನು ಕಣ್ಣೀರಾಗಿಸಿದೆ.

ಪೊಲೀಸರ ಪ್ರಕಾರ, ಮನೆಯ ಒಂದು ಕೋಣೆಯಲ್ಲಿ ಕುಟುಂಬದ ನಾಲ್ವರು ಇದ್ದಾಗ ಏಕಾಏಕಿ ಮೇಲ್ಛಾವಣಿ ಕುಸಿದಿದೆ. ಆ ಸಮಯದಲ್ಲಿ ಅನ್ಶಿಕಾ ಮಗುವಿಗೆ ಹಾಲುಣಿಸುತ್ತಿದ್ದರು. ಮತ್ತೊಂದೆಡೆ ಹರ್ಷ್ ಮತ್ತು ಅವರ ತಾಯಿ ವಿನೋದಿನಿ ಮಾತನಾಡುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಮೇಲ್ಛಾವಣಿ ಕುಸಿದ ಭಾರೀ ಶಬ್ದ ಕೇಳುತ್ತಿದ್ದಂತೆ ಕುಟುಂಬದ ಇತರ ಸದಸ್ಯರು ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಿ ಅದರಡಿ ಸಿಲುಕಿದ್ದ ನಾಲ್ವರನ್ನು ಹೊರತೆಗೆದು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದರೆ, ವೈದ್ಯರು ವಿನೋದಿನಿ, ಅನ್ಶಿಕಾ ಮತ್ತು ಹಸುಗೂಸು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಕುಸಿದ ಮನೆ ಸುಮಾರು 35 ವರ್ಷ ಹಳೆಯದಾಗಿದ್ದು, ಒಂದೇ ಅಂತಸ್ತಿನ ಕಟ್ಟಡವಾಗಿದೆ. ಕುಟುಂಬದ ನಾಲ್ವರೂ ಎಂದಿನಂತೆ ಬೆಳಗಿನ ಕೆಲಸಗಳಲ್ಲಿ ತೊಡಗಿದ್ದಾಗ ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ ಎಂದು ಸಂಬಂಧಿಕರು ಹೇಳಿದ್ದಾರೆ.

ಮೇಲ್ಛಾವಣಿಯ ಆಧಾರ ಕಂಬದ ಒಂದು ಭಾಗ ವಿನೋದಿನಿ ಅವರ ಮೇಲೆ ಬಿದ್ದಿದ್ದರೆ, ಅನ್ಶಿಕಾ ಮತ್ತು ಮಗು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಹರ್ಷ್ ಅವರಿಗೂ ಗಾಯಗಳಾಗಿದ್ದರೂ ಅವರು ಬದುಕುಳಿದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಎಸ್.ಎಂ. ಖಾಸಿಂ ಅಬಿದಿ, ಪ್ರಾಥಮಿಕ ತನಿಖೆಯ ಪ್ರಕಾರ ಮನೆಯ ಮೇಲ್ಛಾವಣಿಯಲ್ಲಿ ನೀರು ಸೋರಿಕೆಯಾಗುತ್ತಿದ್ದ ಕಾರಣ ಅದರ ಬಲ ಕುಂದಿರಬಹುದು. ಸಂಗ್ರಹವಾದ ನೀರಿನ ಭಾರವೂ ಹೆಚ್ಚಾಗಿ ಮೇಲ್ಛಾವಣಿ ಕುಸಿಯಲು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ತಂಡವೂ ಪರಿಶೀಲನೆ ನಡೆಸಿದೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಕುಟುಂಬಸ್ಥರು ಮೃತದೇಹಗಳನ್ನು ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲು ನಿರಾಕರಿಸಿದ್ದರು. ಬಳಿಕ ಪೊಲೀಸರು ಮನವೊಲಿಸಿ ಪರೀಕ್ಷೆ ನಡೆಸಲು ಒಪ್ಪಿಸಿದ್ದಾರೆ.


Spread the love

About Laxminews 24x7

Check Also

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65ರ ವೃದ್ಧ

Spread the loveಕಾರವಾರ: ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆಘಾತಕಾರಿ ಪ್ರಕರಣ ಮುಂಡಗೋಡು ತಾಲೂಕಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ